ನಕಲಿ ಪತ್ರ ಎಂಬ ಆರೋಪ: ಸಿಎಂ-ಡಿಕೆಶಿ ಗೌಪ್ಯ ಚರ್ಚೆ

0
24

ಬೆಂಗಳೂರು: ಒಂದೆಡೆ ತಮ್ಮ ವಿರುದ್ಧ ಬಿ.ಎಸ್. ಯಡಿಯೂರಪ್ಪ ಷಡ್ಯಂತ್ರ ರೂಪಿಸಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಪತ್ರ ಬಿಡುಗಡೆ ಮಾಡಿದ್ದರೆ, ಇನ್ನೊಂದೆಡೆ ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಅದು ಬಿಎಸ್‍ವೈ ಪತ್ರ ಅಲ್ಲವೇ ಅಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ.
ಒಟ್ಟಾರೆ ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಸುರೇಶ್ ಬಿಡುಗಡೆ ಮಾಡಿದ ಪತ್ರದ ಮೂಲ ವಿವರ ಈಗಲೂ ನಿಗೂಢವಾಗಿದೆ.ಇಡಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬರೆದಿದ್ದಾರೆನ್ನಲಾದ ಪತ್ರವನ್ನು ಸಂಸದ ಡಿ.ಕೆ.ಸುರೇಶ್ ಪ್ರದರ್ಶಿಸಿದ್ದರು.ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಯನ್ನು ರಾಜ್ಯ ಬಿಜೆಪಿ ನಾಯಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಈ ನಿಟ್ಟಿನಲ್ಲಿ ಬಿಎಸ್‍ವೈ ಕೂಡ 2017ರ ಜನವರಿ 10ರಂದು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ವಿವರಿಸಿದ್ದರು.
ಡಿ.ಕೆ.ಶಿವಕುಮಾರ್,ಡಿ.ಕೆ.ಸುರೇಶ್ ಮತ್ತು ಅವರ ಸಹವರ್ತಿಗಳು ಭ್ರಷ್ಟಾಚಾರ ನಡೆಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ.ಕೂಡಲೇ ತನಿಖೆ ನಡೆಸಿ ಕ್ರಮಕೈಗೊಳ್ಳಿ ಎಂದು ಐಟಿ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಉಲ್ಲೇಖವಿದೆ. ಪತ್ರ ಬರೆದು ಒತ್ತಡ ಹೇರಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ ಎಂದು ಸುರೇಶ್ ದೂರಿದ್ದರು.
ಡಿ.ಕೆ.ಶಿವಕುಮಾರ್ ವಿರುದ್ಧ ಐಟಿ ದಾಳಿ ನಡೆಸಲು ಪ್ರೇರೇಪಿಸಿ ಯಡಿಯೂರಪ್ಪ ಪತ್ರ ಬರೆದಿದ್ದಾರೆಂಬ ಸಂಸದ ಡಿ.ಕೆ.ಸುರೇಶ್ ಆರೋಪ ಹಾಗೂ ಅದು ನಕಲಿ ಎಂದು ಖುದ್ದು ಬಿಎಸ್‍ವೈ ಸ್ಪಷ್ಟನೆ ನೀಡಿದ್ದಾರೆ.
ಸುರೇಶ್ ಬಿಡುಗಡೆ ಮಾಡಿದ ಪತ್ರಕ್ಕೆ ಪ್ರತಿಯಾಗಿ,ಯಡಿಯೂರಪ್ಪರ ಅಸಲಿ ಲೆಟರ್‍ಗಿಂತ ಭಿನ್ನವಾಗಿರುವುದನ್ನು ಎತ್ತಿ ತೋರಿಸಿ, ಇದು ಸುಳ್ಳು ಪತ್ರ ಎಂದು ಹೇಳಿಕೊಂಡಿದ್ದಾರೆ.ಬಿಜೆಪಿ ಪಕ್ಷ ಕೂಡ ಟ್ವಿಟರ್ ಮೂಲಕವೇ ಈ ಬಗ್ಗೆ ಹಲವು ಮಾಹಿತಿ ಒದಗಿಸಿದೆ.
ಈ ಘಟನೆಯಿಂದ ವಿಚಲಿತರಾಗಿರುವ ಸಿಎಂ ಕುಮಾರಸ್ವಾಮಿ ಕೂಡ ಸಚಿವ ಡಿ.ಕೆ.ಶಿವಕುಮಾರ್ ಜತೆ ರಹಸ್ಯಚರ್ಚೆ ನಡೆಸಿದ್ದಾರೆ.ಇವರ ಭೇಟಿಗೂ ಮುನ್ನ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಕೂಡ ಡಿಕೆಶಿ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ಕೊಟ್ಟು ಚರ್ಚಿಸಿದ್ದರು.ಐಟಿ ತನಿಖೆ ಹಾಗೂ ಮುಂದಿನ ಕೆಲದಿನಗಳಲ್ಲಿ ತಾನು ಹಾಗೂ ತನ್ನ ಸೋದರನ ಬಂಧನವಾ ಗುವ ಸಾಧ್ಯತೆ ಇದೆ ಎಂಬ ಮಾಹಿತಿ ಕೂಡ ಇದೆ ಎಂಬ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಇದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಯತ್ನವನ್ನು ಬಿಜೆಪಿ ಮೊದಲಿನಿಂದಲೂ ಮಾಡಿಕೊಂಡು ಬಂದಿದೆ.ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯತ್ನದಲ್ಲಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಸದ್ಯ ಬಿಜೆಪಿಯ ಕೆಲ ಶಾಸಕರನ್ನು ತಮ್ಮತ್ತ ಸೆಳೆದು ಬಿಜೆಪಿಗೆ ಶಾಕ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕೆಲ ಶಾಸಕರನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿಯೂ ಇದೆ.
ಒಟ್ಟಾರೆ ಇನ್ನು ಕೆಲವೇ ದಿನಗಳಲ್ಲಿ ನಡೆಯಬಹುದಾದ ಒಂದು ಆಘಾತಕಾರಿ ಸನ್ನಿವೇಶದ ಕುರಿತು ಬಿಜೆಪಿ ಕೂಡ ಎದುರು ನೋಡುತ್ತಿದೆ, ಡಿಕೆ ಸೋದರರು ಕೂಡ ಆತಂಕದ ದಿನ ಎದುರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ.

loading...