ನಗರಸಭೆ ಚುನಾವಣಾ ಪ್ರಚಾರಕ್ಕೆ ಮೋದಿ, ಗಾಂಧೀಜಿ!

0
24

ಕನ್ನಡಮ್ಮ ಸುದ್ದಿ-ಕಾರವಾರ: ನಗರಸಭೆ ಚುನಾವಣೆ ಪ್ರಚಾರಕ್ಕೆ ಇಂದು ನಗರಕ್ಕೆ ಪ್ರಧಾನಿ ಮೋದಿ ಮತ್ತು ಮಹಾತ್ಮಾ ಗಾಂಧೀ ಆಗಮಿಸಿ ಸಾರ್ವಜನಿಕರ ಗಮನಸೆಳೆದರು.
ಇಲ್ಲಿನ ನಗರಸಭೆ ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಮತದಾನದ ಮುನ್ನಾದಿನ ಥೇಟ್‌ ಮೋದಿ ಮತ್ತು ಗಾಂಧೀಜಿಯಂತೆ ಕಾಣುವ ಇಬ್ಬರನ್ನು ಕರೆಸಿ ನಗರದ ಮತದಾರರನ್ನು ಸೆಳೆಯಲು ಕೊನೆಯ ಪ್ರಯತ್ನ ನಡೆಸಿತು. ಮೋದಿಯಂತೆ ಕಾಣುವ ಉಡುಪಿ ಜಿಲ್ಲೆಯ ಹಿರಿಯಡ್ಕದ ಸದಾನಂದ ನಾಯಕ್‌ ಮತ್ತು ಗೋವಾದ ಆಗಸ್ಟಿನ್‌ ಅಲಮೇಡಾ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ತಾನು ಪ್ರಧಾನಿ ಮೋದಿಯಂತೆ ಹೋಲುತ್ತಿರುವುದರಿಂದ ಸಮಾಜದಲ್ಲಿ ತನಗೆ ಹೆಚ್ಚು ಗೌರವ ಸಿಗುತ್ತಿದೆ. ಪ್ರಧಾನಿ ಮೋದಿಯವರನ್ನು ಇವರೆಗೂ ಭೇಟಿ ಮಾಡಿಲ್ಲ. ಜೀವನದಲ್ಲಿ ಒಮ್ಮೆಯಾದರೂ ಅವರನ್ನು ಭೇಟಿಯಾಗಬೇಕೆಂಬ ಆಸೆ ತಮಗಿದೆ ಎಂದು ಸದಾನಂದ ನಾಯಕ್‌ ಹೇಳಿದರು.
ಗಾಂಧೀಜಿ ಬದುಕಿದ್ದರೆ ಖಂಡಿತವಾಗಿ ಬಿಜೆಪಿ ಸೇರುತ್ತಿದ್ದರು ಎಂದು ಗಾಂಧೀಜಿ ಹೋಲುವ ಗೋವಾದ ಆಗಸ್ಟಿನ್‌ ಹೇಳಿದರು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧೀ ಒಬ್ಬ ಅನನುಭವಿ ರಾಜಕಾರಣಿ. ದೇಶದ ಜನಸಾಮಾನ್ಯರ ಭಾವನೆಯನ್ನು ಅರಿಯದ ವ್ಯಕ್ತಿ ಆತ. ಡಾಲರ್‌ ಎದುರು ದೇಶದ ರೂಪಾಯಿ ಮೌಲ್ಯ ಕುಸಿದಿರುವ ಬಗ್ಗೆ ಆತನಿಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. 1971 ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಬಾಂಗ್ಲಾ ಯುದ್ಧ ನಡೆದಿತ್ತು. ಆ ಸಮಯದಲ್ಲಿ ಡಾಲರ್‌ ಮತ್ತು ರೂಪಾಯಿ ಮೌಲ್ಯ ಸರಿಸಮನಾಗಿತ್ತು. ಆದರೆ ಯುದ್ಧ ಮುಗಿದ ಮೂರು ತಿಂಗಳಲ್ಲೇ ಡಾಲರ್‌ ಎದರು ರೂಪಾಯಿ 11 ರೂಪಾಯಿಯಾಯಿತು. ಇದನ್ನು ಮೊದಲು ರಾಹುಲ್‌ ಅರಿಯಬೇಕು ಎಂದು ಟಾಂಗ್‌ ನೀಡಿದರು. ಒಟ್ಟಿನಲ್ಲಿ ಇವರಿಬ್ಬರ ಪ್ರಚಾರದಿಂದ ಬಿಜೆಪಿಗೆ ಯಾವ ಅನುಕೂಲವಾಗಲಿದೆ ಎಂಬುದನ್ನು ಮತ ಏಣಿಕೆಯವರೆಗೆ ಕಾದು ನೋಡಬೇಕಿದೆ.

loading...