ನಗರಸಭೆ ಚುನಾವಣೆ: ಜಿಲ್ಲಾಡಳಿತ ಸಕಲ ಸಿದ್ಧತೆ

0
23

ಕನ್ನಡಮ್ಮ ಸುದ್ದಿ-ಶಿರಸಿ: ಶಿರಸಿ ನಗರಸಭೆ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಸಕಲ ರೀತಿಯ ಸಿದ್ಧತೆ ನಡೆಸಿದ್ದು, ನಗರದ 57 ಮತೆಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಶಿರಸಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ತಿಳಿಸಿದರು.
ಗುರುವಾರ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಗರದ 31 ವಾರ್ಡ್‍ಗಳಿಗೆ ನಡೆಯುವ ಚುನಾವಣೆಗೆ ಈಗಾಗಲೇ ಮೀಸಲಾತಿ ನಿಗದಿಯಾಗಿದೆ. ಸುಮಾರು 48468 ಮತದಾರರಿದ್ದು ಮತದಾನಕ್ಕೆ 57 ಮತಗಟ್ಟೆಗಳನ್ನು ಸಿದ್ಧಪಡಿಸಲಾಗುವುದು. ಮತದಾರರು ಹೆಚ್ಚಿರುವ ಕಡೆ ಗರಿಷ್ಠ 2 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗುವುದು ಎಂದರು. ಪಾರದರ್ಶಕ ಚುನಾವಣೆ ನಡೆಸುವ ಉದ್ದೇಶದಿಂದ ಈಗಾಗಲೇ 4 ಚುನಾವಣಾಧಿಕಾರಿಗಳ ನೇಮಕವಾಗಿದೆ. 1ರಿಂದ 8ನೇ ವಾರ್ಡ್‍ಗಳಿಗೆ ಕೃಷಿ ಇಲಾಖೆ ಉಪನಿರ್ದೇಶಕ ಟಿ.ಎಚ್.ನಟರಾಜ, 9ರಿಂದ 16ನೇ ವಾರ್ಡ್‍ಗಳಿಗೆ ತೋಟಗಾರಿಕ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, 17ರಿಂದ 24ನೇ ವಾರ್ಡ್‍ಗಳಿಗೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ ಆಜೂರ ಹಾಗೂ 25ರಿಂದ 31ನೇ ವಾರ್ಡ್‍ಗಳಿಗೆ ಶಿರಸಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ವಾರ್ಡ್ 1ರಿಂದ 24ರವರೆಗಿನ ಚುನಾವಣಾಧಿಕಾರಿಗಳ ಕಚೇರಿ ನಗರಸಭೆಯಲ್ಲಿ ಕಾರ್ಯನಿರ್ವಹಿಸಿದರೆ, 25ರಿಂದ 31ನೇ ವಾರ್ಡ್‍ಗಳ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳು ಶಿರಸಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ ಎಂದು ಹೇಳಿದರು.

ಈ ಬಾರಿ ಮತದಾನಕ್ಕೆ ಇವಿಎಂ ಮಷಿನ್ ಬಳಸಲಾಗುತ್ತಿದೆ. ಈಗಾಗಲೇ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿ ನೀಡಲಾಗಿದೆ ಎಂದ ಅವರು, ಪ್ರತೀ ಬೂತ್‍ಗೆ 4 ಜನ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಶೇ.20ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ಚುನಾವಣೆಗಾಗಿ ನಿಯೋಜಿಸಲಾಗುವುತ್ತದೆ ಎಂದರು.
ನಾಮಪತ್ರ ಸಲ್ಲಿಕೆ ಅ.10ರಿಂದ ಆರಂಭವಾಗಲಿದ್ದು, ಅ.17 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಾರಿಕಾಂಬಾ ಪದವಿಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಕೌಂಟಿಂಗ್ ನಡೆಯಲಿದೆ ಎಂದ ಅವರು, ನಗರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಯ ಗರಿಷ್ಠ ವೆಚ್ಚ 2 ಲಕ್ಷ ರೂಪಾಯಿ ಮೀರಬಾರದು. ಪರಿಶಿಷ್ಟ ಜಾತಿಗೆ ಮೀಸಲಿರುವ ವಾರ್ಡ್‍ನಲ್ಲಿ ಆ ಸಮುದಾಯದ ಅಭ್ಯರ್ಥಿ ಇಲ್ಲದಿದ್ದ ಪಕ್ಷದಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿ ಸ್ಪರ್ಧಿಸಬಹುದು. ಅದೇ ರೀತಿ ಹಿಂದುಳಿದ ಅ ವರ್ಗದ ಸ್ಥಾನದಲ್ಲಿ ಹಿಂದುಳಿದ ಬ ವರ್ಗದ ಅಭ್ಯರ್ಥಿ ಸ್ಪರ್ಧಿಸಬಹುದು ಎಂದು ತಿಳಿಸಿದರು.

ಈ ವೇಳೆ ತಹಶೀಲ್ದಾರ ಎಂ.ಆರ್.ಕುಲಕರ್ಣಿ ಹಾಗೂ ಇತರರು ಇದ್ದರು.

loading...