ನಗರಸಭೆ ವ್ಯಾಪ್ತಿಯ ಪ್ರಣಾಳಿಕೆ ಬಿಡುಗಡೆ

0
27

ಕನ್ನಡಮ್ಮ ಸುದ್ದಿ-ಶಿರಸಿ: ಉತ್ತರ ಕನ್ನಡದ 8 ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 153 ಸ್ಥಾನ ಹೊತುಪಡಿಸಿ ಉಳಿದೆಡೆ ಜೆಡಿಎಸ್‌ ಪಕ್ಷೇತರರ ಜೊತೆ ಕೈಜೋಡಿಸಲಿದೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್‌.ನಾಯ್ಕ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಶಿರಸಿ ನಗರಸಭೆ ವ್ಯಾಪ್ತಿಯ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಪಕ್ಷದ ವತಿಯಿಂದ ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ 153 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಬದಲಾಗಿ ಕೆಲವಡೆ ಮೂಲಭೂತ ಸೌಲಭ್ಯಗಳಿಗಾಗಿ ಹೋರಾಡುತ್ತಿರುವ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲಿಸಲಾಗುವುದು ಎಂದರು. ಹಾಲಿ ಜೆಡಿಎಸ್‌ ಆಡಳಿತದ ಚುಕ್ಕಾಣಿ ಹಿಡಿದಿದೆ. ಅದೇ ರೀತಿ ಸ್ಥಳೀಯ ಸಂಸ್ಥೆಗಳಲ್ಲೂ ಜೆಡಿಎಸ್‌ ಗೆದ್ದರೆ ಹೆಚ್ಚಿನ ಅನುದಾನ ತರಲು ಅನುಕೂಲ ಆಗುತ್ತದೆ. ಈ ದೃಷ್ಟಿಯಿಂದ ಜನರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂದ ಅವರು, ಪಕ್ಷದ ಪ್ರಣಾಳಿಕೆಯಲ್ಲಿ ಜನಪರ ಅಂಶಗಳಿಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆ, ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ರಿಂಗ್‌ ರೋಡ್‌ ನಿರ್ಮಾಣ, ಟ್ರಾಫಿಕ್‌ ಪೊಲೀಸ್‌ ಠಾಣೆ ನಿರ್ಮಾಣ, ಕರ್ನಾಟಕ ಗೃಹ ಮಂಡಳಿ ವತಿಯಿಂದ ಹೊಸದಾಗಿ ನಿವೇಶನ ಹಂಚಿಕೆ, ಕಟ್ಟಡ ನಿರ್ಮಾಣ ಪರವಾನಗಿ ಸರಳೀಕರಣ, ಅತಿಕ್ರಮಣ ಸಮಸ್ಯೆ ನಿವಾರಣೆ, ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹೆಚ್ಚುವರಿ ಬಸ್‌ ಸೌಲಭ್ಯ, ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಸೇರಿದಂತೆ 22 ಅಂಶಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ದೋಷದಿಂದ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಸೋಲಾಗಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದರು. ಜಿಲ್ಲಾದ್ಯಂತ ಅಡಕೆಗೆ ಕೊಳೆ ರೋಗ ಬಾಧೆ ಕಾಡುತ್ತಿದೆ. ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಸರ್ಕಾರದಿಂದ ಪ್ರತೀ ಗುಂಟೆಗೆ 180 ರೂ. ಪರಿಹಾರ ಧನ ನೀಡಲಾಗುತ್ತಿದೆ. ಈ ಮೊತ್ತವನ್ನು ಕನಿಷ್ಠ 2 ಸಾವಿರ ರೂ.ಗೆ ಏರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸಿದಾಗ ಅವರಿಗೆ ಮನವಿ ಸಲ್ಲಿಸಲಾಗುವುದು.
ಈ ವೇಳೆ ಪ್ರಮುಖರಾದ ಶಶಿಭೂಷಣ ಹೆಗಡೆ, ತಿಮ್ಮಪ್ಪ ಮಡಿವಾಳ, ಶೇಖರ ಪೂಜಾರಿ, ಸುಭಾಷ್‌ ಮಂಡೂರ, ಸೇರಿದಂತೆ ಪಕ್ಷದ ಅಧಿಕೃತ ಅಭ್ಯರ್ಥಿಗಳು ಹಾಜರಿದ್ದರು.

loading...