ನಲಪಾಡ್ ವಿದೇಶಕ್ಕೆ ತೆರಳುವ ಕನಸು ಭಗ್ನ

0
19

ಬೆಂಗಳೂರು:ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ವಿದೇಶಕ್ಕೆ ತೆರಳುವ ಕನಸು ಸದ್ಯಕ್ಕೆ ನನಸಾಗುವಂತೆ ಕಾಣುತ್ತಿಲ್ಲ.
ನಲಪಾಡ್ ಬ್ರಿಟನ್‍ಗೆ ತೆರಳಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಅಧೀನ ನ್ಯಾಯಾಲಯದಲ್ಲಿಯೇ ಸಲ್ಲಿಸಿ ಪರಿಹಾರ ಪಡೆಯಲು ಹೈಕೋರ್ಟ್ ಸೂಚಿಸಿದೆ.
ವಿದೇಶ ಪ್ರವಾಸಕ್ಕೆ ತೆರಳಲು ಅನುವಾಗುವಂತೆ ನನ್ನ ಜಾಮೀನು ಷರತ್ತುಗಳನ್ನು ಸಡಿಲಿಸಿ ಎಂದು ನಲಪಾಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿಯನ್ನು ಅಧೀನ ನ್ಯಾಯಾಲಯದಲ್ಲಿಯೇ ಸಲ್ಲಿಸಿ ಪರಿಹಾರ ಪಡೆಯಿರಿ ಎಂದ ನ್ಯಾಯಪೀಠ, ಅರ್ಜಿ ವಿಲೇವಾರಿ ಮಾಡಿದೆ. ನನ್ನ ತಮ್ಮ ಲಂಡನ್‍ನಲ್ಲಿ ಇದ್ದಾನೆ. ಆತನನ್ನು ಭೇಟಿ ಮಾಡಲು ಇದೇ 25 ರಿಂದ 15 ದಿನಗಳ ಕಾಲ ಬ್ರಿಟನ್‍ಗೆ ತೆರಳಲು ಉದ್ದೇಶಿಸಿದ್ದೇನೆ. ಆದ್ದರಿಂದ ಜಾಮೀನು ಷರತ್ತು ಸಡಿಲಿಸಿ ಪ್ರವಾಸಕ್ಕೆ ಅವಕಾಶ ಕಲ್ಪಿಸಬೇಕೆಂದು ನಲಪಾಡ್ ಹೈಕೋರ್ಟ್‍ಗೆ ಮನವಿ ಮಾಡಿದ್ದರು.
ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಲಪಾಡ್ 116 ದಿನಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದರು. ಇವರಿಗೆ ಹೈಕೋರ್ಟ್ ಜೂನ್ 14ರಂದು ಷರತ್ತುಬದ್ಧ ಜಾಮೀನು ನೀಡಿತ್ತು.
2018ರ ಫೆಬ್ರವರಿ 17ರಂದು ರಾತ್ರಿ ಮೊಹಮದ್ ನಲಪಾಡ್ ಮತ್ತು ಆತನ ಸಹಚರರು ನಗರದ ಫರ್ಜಿ ಕಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

loading...