ನಾಳೆ ಎನ್‌ಆರ್‌ಸಿ ವಿರುದ್ಧ ಎಡಪಕ್ಷಗಳಿಂದ ದೇಶಾದ್ಯಂತ ಪ್ರತಿಭಟನೆ

0
4

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ(ಸಿ.ಎ.ಬಿ.) ಮತ್ತು ರಾಷ್ಟ್ರೀಯ ಪೌರತ್ವ ದಾಖಲಾತಿ(ಎನ್‌.ಆರ್‌.ಸಿ.) ವಿರುದ್ಧ ಡಿಸೆಂಬರ್ 19 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)-ಲಿಬರೇಷನ್, ಎಐಎಫ್‌ಬಿ ಮತ್ತು ಆರ್‌ಎಸ್‌ಪಿ, ಈ ಐದು ಎಡಪಕ್ಷಗಳು ಕರೆ ನೀಡಿವೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಈ ಪಕ್ಷಗಳು, ಸಂಸತ್ತಿನ ಎರಡೂ ಸದನಗಳು ಈ ಸಿಎಬಿಯನ್ನು ಪಾಸು ಮಾಡಿವೆ. ಈ ಮಸೂದೆ ಭಾರತೀಯ ಸಂವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ, ಭಾರತೀಯ ಗಣತಂತ್ರದ ಪ್ರಜಾಸತ್ತಾತ್ಮಕ ಬುನಾದಿಯನ್ನು  ನಾಶಪಡಿಸುವುದೇ ಅದರ ಉದ್ದೇಶ. ಆದ್ದರಿಂದ ಇದನ್ನು ಬಲವಾಗಿ ವಿರೋಧಿಸುತ್ತಿದ್ದೇವೆ ಎಂದು ತಿಳಿಸಿದೆ.
ಇದು ಪೌರತ್ವವನ್ನು ಒಬ್ಬ ವ್ಯಕ್ತಿಯ ಧಾರ್ಮಿಕ ನೆಲೆಯೊಂದಿಗೆ ಜೋಡಿಸುತ್ತದೆ, ಇದು ಜಾತ್ಯತೀತತೆಗೆ ತದ್ವಿರುದ್ಧವಾದ ಸಂಗತಿ ಎಂದು ಎಡಪಕ್ಷಗಳು ಹೇಳಿವೆ.
ದೇಶದಲ್ಲಿ ಕೋಮು ವಿಭಜನೆ ಮತ್ತು ಸಾಮಾಜಿಕ ಧ್ರುವೀಕರಣವನ್ನು ಇನ್ನಷ್ಟು ತೀಕ್ಷ್ಣಗೊಳಿಸುವುದು ಈ ಮಸೂದೆಯ ಉದ್ದೇಶ. ಇದು ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಅಪಾಯಕಾರಿ ಹಾನಿಯುಂಟು ಮಾಡುತ್ತದೆ. ಇಂತಹ ಮಸೂದೆ ಪಾಸಾಗಿರುವುದು, ಮತ್ತು ಎನ್‌.ಆರ್‌.ಸಿ.ಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದು ಮೋದಿ-ಶಾ ಸರಕಾರ ಸಾರಿರುವುದು ಭಾರತೀಯ ಗಣತಂತ್ರದ ಸ್ವರೂಪವನ್ನೇ ಬದಲಿಸುವ ಒಂದು ಅವಳಿ ಸಂಯೋಜನೆಯಾಗಿದೆ ಎಂದು ಹೇಳಿಕೆ ಟೀಕಿಸಿದೆ.
ಇದು ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ಗಣತಂತ್ರವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಆರೆಸ್ಸೆಸ್‌ನ ರಾಜಕೀಯ ಯೋಜನೆ. ಇದರ ವಿರುದ್ಧ ಡಿಸೆಂಬರ್ 19ರಂದು ಜನಾಂದೋಲನ ನಡೆಸಬೇಕು ಎಂದು ಐದು ಎಡಪಕ್ಷಗಳು ತಮ್ಮ ಘಟಕಗಳಿಗೆ ಕರೆ ನೀಡಿವೆ.

loading...