ನೀರಿನ ಕರ ಹೆಚ್ಚಳ ವಿರೋಧಿಸಿ ಜೆಡಿಎಸ್ ಧರಣಿ

0
36

ವರದಿ : ವಿಷ್ಣು ಕುಲಕರ್ಣಿ

ಜಮಖಂಡಿ : ನಗರಸಭೆಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ. ನಗರದ ನಾಗರಿಕರಿಗೆ ಕುಡಿಯುವ ನೀರಿನ ಕರವನ್ನು ಹೆಚ್ಚಿಗೆ ಮಾಡಿ ತೊಂದರೆ ನೀಡುತ್ತಿದ್ದಾರೆ. ಇದು ಖಂಡನೀಯ. ಇದನ್ನು ಕೂಡಲೇ ಸರಿಪಡಿಸಬೇಕು. ಎಲ್ಲ ವಾರ್ಡುಗಳಲ್ಲಿ ಸರಿಯಾಗಿ ರಸ್ತೆ, ಬೀದೀದೀಪ, ಶೌಚಾಲಯವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.

ಜಮಖಂಡಿ ತಾಲೂಕಾ ಜೆಡಿಎಸ್ ಅಧ್ಯಕ್ಷ ಸುರೇಶ ಬಾಡಗಿ ವಕೀಲರು ಹಾಗೂ ಹಿರಿಯ ಮುಖಂಡರಾದ ಪಿ.ಎನ್. ಪಾಟೀಲ, ಕಾಡು ಮಾಳಿ, ಬಿ.ಎಸ್. ಸಿಂಧೂರ, ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಅವರ ನೇತೃತ್ವದಲ್ಲಿ ಧರಣಿ ಶಾಂತರೀತಿಯಿಂದ ನಡೆಸಿದರು. ಅಲ್ಲದೆ ಪೌರಾಯುಕ್ತರಿಗೆ ಮನವಿ ಪತ್ರ ಅರ್ಪಿಸಿದರು. ಜಮಖಂಡಿ ನಗರದಲ್ಲಿ ಪ್ರತಿದಿನ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. 600 ರೂ. ಇದ್ದ ನೀರಿನ ಕರವನ್ನು ಒಮ್ಮೆಲೆ 1440 ಕ್ಕೆ ಹೆಚ್ಚಿಸಿದ್ದು ಬರಗಾಲದಿಂದ ತತ್ತರಿಸಿರುವ ಜನತೆಗೆ ನುಂಗಲಾರದ ತುತ್ತಾಗಿದೆ. ಹಿಪ್ಪರಗಿಯಿಂದ ಲಿಫ್ಟ್ ಮಾಡುವ ನೀರನ್ನು ಸರಿಯಾಗಿ ಫಿಲ್ಟರ್ ಮಾಡುತ್ತಿಲ್ಲ. ಈಗ ನಡೆಯುತ್ತಿರುವ ಡ್ರೈನೇಜ್ ವ್ಯವಸ್ಥೆ ಕಳಪೆ ಮಟ್ಟದ್ದಾಗುವ ಸಾಧ್ಯತೆ ಕಂಡುಬರುತ್ತಿದೆ. ಕೆಲವೊಂದು ಕಾಲನಿಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಒಳಚರಂಡಿ ವ್ಯವಸ್ಥೆಯಿಲ್ಲ. ಇದನ್ನು ತಕ್ಷಣವೇ ಸರಿಪಡಿಸಬೇಕು ಎಂಬ ಇವೇ ಮೊದಲಾದ ಬೇಡಿಕೆಗಳ ಒತ್ತಾಯ ಈ ಧರಣಿಯ ಮೂಲ ಉದ್ದೇಶವಾಗಿತ್ತು.

ಇಂದಿನ ಧರಣಿಯು ಯುವ ಘಟಕದ ಆಶ್ರಯದಲ್ಲಿ ಜರುಗಿತು. ಜೆಡಿಎಸ್ ಯುವ ನೇತಾರ ಉಮೇಶ ಆಲಮೇಲಕರ ಹಾಗೂ ಜ್ಯೌತಿಬಾ ಚೌಹ್ವಾಣ ಮತ್ತು ಜ್ಯೌತಿಬಾ ಕಾಬುಲೆ ಸಂಘಟಿಸಿದ್ದು ಧರಣಿ ಅತ್ಯಂತ ಯಶಸ್ವಿಯಾಯಿತು.

ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಎ.ಕೆ. ದಬಾಸೆ, ತಾಲೂಕಾ ಸಂಘಟನಾ ಕಾರ್ಯದರ್ಶಿ ಅಯೂಬ ಗದಗ, ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜೆ.ಎಂ. ಶೇಖ, ಶಂಕರ ಪೂಜಾರಿ, ಗುಡುಸಾಬ ಹೊನವಾಡ, ಸಿ.ಪಿ. ಜನವಾಡ, ಯಾಕೂಬ ನದಾಫ, ಶಫಿ ಸಾರವಾನ, ಸಿದ್ದನಗೌಡ ಪಾಟೀಲ, ಬಿ.ಎಸ್. ಪಾಟೀಲ, ಯಾಸೀನ ಮುಬಾರಕ, ನಾಗೇಶ ಗಡಾದ, ಸುಭಾಷ ಲಗಳಿ, ದೀಪಕ ಪಾಲನಕರ, ನಾಗೇಶ ಗಾಡಿವಡ್ಡರ, ಪುಂಡಲೀಕ ಲೋಣಾರಿ, ಮಾಲಿಂಗ ಗುಡ್ಲಿ, ಮಹೇಶ ಅರಕೇರಿ, ವಿಷ್ಣು ಪತ್ತಾರ, ರಾಜೇಸಾಬ ಮಸಳಿ, ರಿಯಾಜ ಅವಟಿ, ಸುಭಾಷ ಕೊಪ್ಪದ ಅಲ್ಲದೆ ಮಹಿಳಾ ಕಾರ್ಯಕರ್ತೆಯರು ಸೇರಿ ಸುಮಾರು 150 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷ ಶ್ರೀಶೈಲ ರಾಂಬಳ್ಳಿ, ಸ್ಥಾಯಿ ಸಮಿತಿ ಚೇರಮನ್ ಇಫ್ತಿಯಾರ್ ಅವಟಿ, ಸದಸ್ಯರಾದ ಶ್ರೀಕಾಂತ ಕುಲಕರ್ಣಿ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ನೀಡಿದರು.

loading...

LEAVE A REPLY

Please enter your comment!
Please enter your name here