ನೀರು ಹರಿಸದಿದ್ದರೆ ಶಾಸಕ ವಜ್ಜಲ್ ರಾಜೀನಾಮೆ

0
18

ಬೆಂಗಳೂರು, ಫೆ.26- ನಾರಾಯಣ ಎಡದಂಡೆಗೆ ಇನ್ನೆರಡು ದಿನಗಳಲ್ಲಿ ತುಂಗಭದ್ರಾ ಜಲಾಶಯದಿಂದ ನೀರು ಹರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಾಯಚೂರು ಜಿಲ್ಲೆ ಮಸ್ಕಿ ಶಾಸಕ ಮಾನಪ್ಪ ವಜ್ಜಲ್ ಬೆದರಿಕೆ ಹಾಕಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ ಮಾನಪ್ಪ ವಜ್ಜಲ್ ರೈತರ ಹಿತದೃಷ್ಟಿಯಿಂದ ತಕ್ಷಣವೇ ಕಾಲುವೆಗೆ ನೀರು ಹರಿಸಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಚ್ಚರಿಸಿದರು.

ಸುಮಾರು ಸಾವಿರಾರು ಎಕರೆ ಬೆಳೆದು ನಿಂತ ಬೆಳೆ ನೀರಿಲ್ಲದೆ ಒಣಗಿ ಹೋಗುತ್ತಿದೆ. ಕಳೆದ ಹಲವು ದಿನಗಳಿಂದ ನೀರು ನಿಂತು ಹೋಗಿರುವುದರಿಂದ ಬೆಳೆ ನಷ್ಟವಾಗುತ್ತಿದೆ. ರೈತರ ಹಿತದೃಷ್ಟಿಯಿಂದಲಾದರೂ ಸರ್ಕಾರ ನೀರು ಹರಿಸಲು ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದರು.

ಅನೇಕ ಬಾರಿ ಕಾಲುವೆಗೆ ನೀರು ಹರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿತ್ತು. ಯಾವುದೇ ಪ್ರಯೋಜನವಾಗದ ಕಾರಣ ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಸಂದರ್ಭ ಬಂದಿದೆ ಎಂದು ಹೇಳಿದರು.ಎರಡು ದಿನದಲ್ಲಿ ಕಾಲುವೆಗಳಿಗೆ ನೀರು ಹರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನಗೆ ಪಕ್ಷಕ್ಕಿಂತ ರೈತರ ಹಿತ ಮುಖ್ಯ ಎಂದು ತಿಳಿಸಿದರು.

ಈಗಾಗಲೇ ಬಿಜೆಪಿ ಬಿಡಲು ಮುಂದಾಗಿರುವ ಮಾನಪ್ಪ ವಜ್ಜಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಲಿದ್ದಾರೆ ಎಂಬ ವದಂತಿ ಹಬ್ಬಿದೆ. ಇದೀಗ ನೀರಿನ ಕಾರಣವನ್ನೇ ನೆಪವಾಗಿಟ್ಟುಕೊಂಡು ಬಿಜೆಪಿಗೆ ಗುಡ್ಬೈ ಹೇಳಲು ಮುಂದಾಗಿದ್ದಾರೆ ಎಂಬ ವದಂತಿ ಹಬ್ಬಿದೆ.

 

loading...

LEAVE A REPLY

Please enter your comment!
Please enter your name here