ಪರಿವರ್ತನಾ ಯಾತ್ರೆಗೆ ಕ್ಷೇತ್ರದಲ್ಲಿ ಅಪಾರ ಜನಬೆಂಬಲ: ಮುತ್ನಾಳ

0
34

ಚನ್ನಮ್ಮ ಕಿತ್ತೂರು: ಪರಿವರ್ತನಾ ಯಾತ್ರೆಗೆ ಕ್ಷೇತ್ರದಲ್ಲಿ ಅಪಾರ ಜನಬೆಂಬಲ ವ್ಯಕ್ತವಾಗಿದ್ದು, ಕಿತ್ತೂರು ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಒಟ್ಟು 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ರಾಜ್ಯದ ಚುಕ್ಕಾಣಿಯನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಪಕ್ಷ ಹಿಡಿಯಲಿದೆ ಎಂದು ಕಿತ್ತೂರು ಬಿಜೆಪಿ ಮಂಡಳ ಅಧ್ಯಕ್ಷ ಚಿನ್ನಪ್ಪ ಮುತ್ನಾಳ ಹೇಳಿದರು.
ಇಲ್ಲಿನ ವಿದ್ಯಾಗಿರಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಹಲವಾರು ಜನಪರ ಯೋಜನೆಗಳನ್ನು ತಂದು ದೇಶದ ಅಭಿವೃದ್ಧಿಗೆ ಪ್ರಧಾನಿ ಮೋದಿಯವರು ಪಣ ತೊಟ್ಟಿದ್ದಾರೆ. ಅಭಿವೃದ್ಧಿಯನ್ನು ದೂರ ತಳ್ಳಿರುವ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕ್ಷೇತ್ರ ಮತ್ತು ರಾಜ್ಯದಿಂದ ಕಿತ್ತೆಸೆಯಲು ಜನರು ತಿರ್ಮಾನಿಸಿದ್ದು, ನಮಗೆ ಕ್ಷೇತ್ರದಲ್ಲಿ ಬಾರೀ ಜನಬೆಂಬಲ ಸಿಗುತ್ತಿದೆ. ಶಾಸಕ ಡಿ.ಬಿ. ಇನಾಮದಾರ ಆಡಳಿತ ವೈಫಲ್ಯತೆಯಿಂದ ಕಿತ್ತೂರು ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಇದನ್ನು ಮನಗಂಡು ಜನತೆ ಮುಂದಿನ ದಿನಗಳಲ್ಲಿ ಬಿಜೆಪಿಯೆಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಎಂದರು.

ದಿ. 17 ರಂದು ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಕಿತ್ತೂರಿಗೆ ಆಗಮಿಸುತ್ತಿದ್ದು ಕೇಂದ್ರ ಸಚಿವರು ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಬಿಎಸ್‍ವೈ ನೇತೃತ್ವದಲ್ಲಿ ಕಿತ್ತೂರು ಪ್ರವೇಶಿಸಲಿದ್ದು, ಬಿಜೆಪಿ ಯುವ ಮೋರ್ಚಾ ಸದಸ್ಯರಿಂದ ಎರಡು ಸಾವಿರ ಬೈಕ್ ಮೂಲಕ ರ್ಯಾಲಿ ಮೂಲಕ ಸ್ವಾಗತ ಕೋರಲಿದ್ದಾರೆ. ನಂತರ ಪಟ್ಟಣದ ಗುರು ಸಿದ್ದೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಬೃಹತ್ ಸಮಾರಂಭ ನೆರವೇರಲಿದ್ದು, ಸಮಾರಂಭಕ್ಕೆ ಸುಮಾರು 20 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಆಗಮಿಸಲಿದ್ದಾರೆ.
ಮಾಜಿ ಶಾಸಕ ಸುರೇಶ ಮಾರಿಹಾಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ, ಮಾಜಿ ಎಪಿಎಂಸಿ ಅಧ್ಯಕ್ಷ ಸಿ.ಆರ್. ಪಾಟೀಲ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸನಗೌಡ ಸಿದ್ರಾಮನಿ, ನ್ಯಾಯವಾದಿ ಆನಂದ ಜಕಾತಿ, ಸಿದ್ದಯ್ಯ ಹಿರೇಮಠ, ಜಗದೀಶ ವಸ್ತ್ರದ, ಸಂದೀಪ ದೇಶಪಾಂಡೆ ಮಾತನಾಡಿದರು. ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಹನುಮಂತ ಕೊಟಬಾಗಿ ವೇದಿಕೆಯಲ್ಲಿದ್ದರು. ಶಿವಾನಂದ ಹನುಮಸಾಗರ ನಿರೂಪಿಸಿದರು.

 

loading...