ಪರಿಸರ ರಕ್ಷಣೆ ಎಲ್ಲರ ಕರ್ತವ್ಯ: ಮಹಾಂತೇಶ

0
23

ಕನ್ನಡಮ್ಮ ಸುದ್ದಿ-ಮುಂಡರಗಿ: ಕಳೆದ ಎರಡೂವರೆ ವರ್ಷದಿಂದ ಕಪ್ಪತ್ತಗುಡ್ಡವನ್ನು ಬೆಂಕಿಯಿಂದ ರಕ್ಷಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಹಿಂದೆ ಬೇಸಿಗೆ ಸಂದರ್ಭದಲ್ಲಿ ಕಪ್ಪತ್ತಗುಡ್ಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಬೀಳುವ ಮೂಲಕ ಅಪಾರ ಪ್ರಮಾಣದ ಔಷಧಿ ಸಸ್ಯಗಳು, ಗಿಡ-ಮರಗಳು ನಾಶವಾಗುತ್ತಿದ್ದವು ಎಂದು ಕಪ್ಪತ್ತಹಿಲ್ಸ್‌ ವಲಯ ಅರಣ್ಯಾಧಿಕಾರಿ ಮಹಾಂತೇಶ ನ್ಯಾಮತಿ ಹೇಳಿದರು.
ಎಸ್‌.ಎಸ್‌.ವಿ.ಪಿ.ಕಲಕೇರಿ ಮತ್ತು ಬಸವೇಶ್ವರ ವಿದ್ಯಾ ಸಮೀತಿ ಕಲಕೇರಿಯ ಟಿ.ಎಸ್‌.ಪಾಟೀಲ ಪ್ರೌಢÀಶಾಲೆ, ಬಸವೇಶ್ವರ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ ಬಾಗೇವಾಡಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಪರಿಸರ ಜಾಗೃತಿ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ 10 ವರ್ಷಗಳ ಕಾಲ ಹೀಗೆ ಕಪ್ಪತ್ತಗುಡ್ಡವನ್ನು ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಣೆ ಮಾಡಿದರೆ ಇದು ಯಾವುದೇ ಸಹ್ಯಾದ್ರಿ ಬೆಟ್ಟಕಿಂತಲೂ ಕಡಿಮೆಯಾಗುವುದಿಲ್ಲ. ಮಕ್ಕಳು ಗಿಡ-ಮರಗಳನ್ನು ಕಡಿಯದಂತೆ, ಅವುಗಳಿಂದಾಗುವ ಉಪಯೋಗಗಳ ಕುರಿತು ಪಾಲಕರಿಗೆ, ಸಹೋದರರಿಗೆ ಮನದಟ್ಟು ಮಾಡಿಕೊಡಬೇಕು. ಅಂದಾಗ ಪರಿಸರ ಸಂರಕ್ಷಿಸಲು ಸಾಧ್ಯವಾಗುತ್ತದೆ. ಶಾಲಾ ಹಂತದಲ್ಲಿ ಶಿವಕುಮಾರಗೌಡ ಪಾಟೀಲ ಪರಿಸರ ಸಂರಕ್ಷಣೆಗೆ ಪೂರಕವಾದ ಕಾರ್ಯ ಮಾಡುತ್ತಿದ್ದಾರೆ ಎಂದರು.
ಪರಿಸರವಾದಿ ಪ್ರಾ.ಸಿ.ಎಸ್‌.ಅರಸನಾಳ ಮಾತನಾಡಿ, ಇಂದು ಮಕ್ಕಳಿಗೆ ಬದುಕಿನಲ್ಲಿ ಅಕ್ಷರ ಜ್ಞಾನ ಎಷ್ಟು ಮಹತ್ವವನ್ನು ಹೊಂದಿರುತ್ತದೆಯೋ, ಪರಿಸರ ಜ್ಞಾನವೂ ಅಷ್ಟೇ ಅವಶ್ಯವಾಗಿದೆ. ನಾವು ನಮ್ಮ ಅಭಿವೃದ್ಧಿಗಾಗಿ ಗಿಡ-ಮರಗಳನ್ನು ಕಡಿಯುವ ಕೆಲಸವನ್ನುಮಾಡುತ್ತಿದ್ದೇವೆ ಹೊರತು ಮರಳಿ ಗಿಡಗಳನ್ನು ನೆಡುವ ಕೆಲಸ ನಮ್ಮಿಂದ ನಡೆಯುತ್ತಿಲ್ಲ. ಇದು ಹೀಗೆ ಮುಂದುವರೆದಲ್ಲಿ ಮುಂದೊಂದು ದಿನ ನಾವೆಲ್ಲರೂ ಬೆಣ್ಣಿನ ಮೇಲೆ ಆಕ್ಷಿಜನ್‌ ಕಟ್ಟಿಕೊಂಡು ಓಡಾಡುವ ಪರಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಹಾಗೂ ಮುಂಡರಗಿ ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಬಾಗೇವಾಡಿ ಗ್ರಾಮದಲ್ಲಿರುವ ಈ ಶಾಲೆಯನ್ನು ಪರಿಸರ ಸ್ನೇಹಿ ಶಾಲೆ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಇಲ್ಲಿ ಈಗಾಗಲೇ 525 ಗಿಡಗಳನ್ನು ನೆಟ್ಟಿದ್ದು, ಎಲ್ಲ ಮಕ್ಕಳೂ ಸೇರಿ ನಿತ್ಯವೂ ಗಿಡಗಳನ್ನು ಖಾಳಜಿ ಮಾಡುವುದು ಅವಶ್ಯವಾಗಿದೆ. ಇನ್ನು ಮುಂದೆ ವಿವಿಧ ಪ್ರದೇಶಗಳಲ್ಲಿ ಪ್ರತಿವರ್ಷ ಒಂದು ಸಾವಿರ ಮರಗಳನ್ನು ನೆಡಲು ಯೋಚಿಸಲಾಗಿದೆ. ಮಕ್ಕಳು ಪರಿಸರಕ್ಕೆ ಪೂರಕವಾದ ಕಾರ್ಯದಲ್ಲಿ ತಮ್ಮನ್ನು ತಾವವು ತೊಡಗಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಕುಮಾರಗೌಡ ಪಾಟೀಲರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹೆಸ್ಕಾ ಎಇಇ ಎಂ.ಬಿ.ಗೌರೋಜಿ, ಪ್ರವೀಣ ಕಂಚೇರ, ಮುತ್ತಯ್ಯ ವಿರುಪಾಪೂರಮಠ, ಶಾಲಾ ಮುಖ್ಯೋಪಾಧ್ಯಾಯ ಕೆ.ಜಿ.ಹಿರೇಮಠ, ಎಸ್‌.ಎಸ್‌.ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೆ.ಜಿ.ಹಿರೇಮಠ ಸ್ವಾಗತಿಸಿ, ಎಂ.ವೈ.ನಾಯಕ ನಿರೂಪಿಸಿ, ಪಿ.ಸಿ.ಪಾಟೀಲ ವಂದಿಸಿದರು.

loading...