ಪುರಸಭೆ ಚುನಾವಣೆ: ಶೇ. 77.49 ರಷ್ಟು ಮತದಾನ

0
19

ಹಳಿಯಾಳ: ಪುರಸಭೆ ಆಡಳಿತ ಮಂಡಳಿಗೆ ಶುಕ್ರವಾರ ನಡೆದ ಚುನಾವಣೆ ಮತದಾನವು ಭಾರಿ ತುರಿಸಿನಿಂದ ನಡೆದಿದ್ದು ಒಟ್ಟು 23 ವಾರ್ಡ್‌ಗಳಲ್ಲಿ 77.49 ರಷ್ಟು ಮತದಾನವಾಗಿದೆ. 18234 ಮತದಾರರ ಪೈಕಿ 14130 ಮತದಾರರು ಮತ ಚಲಾಯಿಸಿದ್ದಾರೆ.
ವಾರ್ಡ್‌ ಸಂಖ್ಯೆ 2 ರಲ್ಲಿ 832 ಮತದಾರರ ಪೈಕಿ 740 ಮತದಾರರು ಮತ ಚಲಾಯಿಸಿದ್ದು 88.94 ರಷ್ಟು ಮತದಾನವಾಗಿದೆ. ವಾರ್ಡ್‌ ನಂ. 4 ರಲ್ಲಿ 991 ಮತದಾರರ ಪೈಕಿ 667 ಜನ ಮತ ಚಲಾಯಿಸಿದ್ದಾರೆ. ಶೇ. 67.31 ರಷ್ಟು ಮತದಾನವಾಗಿದೆ.
ಸಚಿವ ಆರ್‌.ವಿ. ದೇಶಪಾಂಡೆಯವರು ತಾವು ನಿವಾಸ ಹೊಂದಿರುವ ವಾರ್ಡ್‌ ನಂ. 14 ರಲ್ಲಿ ಸರದಾರ ವಲ್ಲಭಭಾಯಿ ಪಟೇಲ್‌ ಉದ್ಯಾನವದಲ್ಲಿರುವ ಮತಗಟ್ಟೆಯಲ್ಲಿ ಪತ್ನಿ ರಾಧಾ ಹಾಗೂ ಹಿರಿಯ ಪುತ್ರ ಪ್ರಸಾದ ಅವರೊಂದಿಗೆ ಬಂದು ಮತ ಚಲಾಯಿಸಿದರು. ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಅವರು ವಾರ್ಡ್‌ ನಂ. 2 ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಆವರಣದಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಹಾಗೂ ಭಾಜಪ ಮುಖಂಡ ಸುನೀಲ ಹೆಗಡೆ ಇವರು ಶಾಸಕರ ಮಾದರಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತ ಹಾಕಿದರು.
ಪ್ರತಿ ಮತಗಟ್ಟೆ ಎದುರು ಕಾಂಗ್ರೆಸ್‌ ಹಾಗೂ ಭಾಜಪದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಮತದಾನ ಪ್ರಕ್ರಿಯೆ ಮುಗಿಯುವವರೆಗೂ ತಮ್ಮ ಅಭ್ಯರ್ಥಿಗಳ ಪರ ಪ್ರಭಾವ ಬೀರುತ್ತಿರುವುದು ಕಂಡು ಬಂದಿತು. ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸಹ ತಾವು ಸ್ಪರ್ಧಿಸಿದ ವಾರ್ಡ್‌ಗಳ ಮತಗಟ್ಟೆಗಳ ಎದುರು ಇದ್ದರು.
ಚುನಾವಣೆಯ ಮುಂಚಿನ ದಿನ ಗುರುವಾರ ರಾತ್ರಿ ಹಲವಾರು ಕಡೆಗಳಲ್ಲಿ ಮತದಾರರಿಗೆ ನಗದು ಹಾಗೂ ವಸ್ತು ರೂಪದಲ್ಲಿ ಕಾಣಿಕೆಗಳನ್ನು ನೀಡಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ಗುತ್ತಿಗೇರಿ ಗಲ್ಲಿಯಲ್ಲಿ ಮತದಾರರ ಮನೆಗಳಿಗೆ ತೆರಳಿ ಕುಕ್ಕರ್‌ ವಿತರಿಸಲಾಗುತ್ತಿದೆ ಎಂದು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅಲ್ಲಿನ ಚುನಾವಣಾಧಿಕಾರಿಗಳು ದೌಡಾಯಿಸಿದಾಗ ಕುಕ್ಕರ್‌ ವಿತರಣೆ ಮಾಡುತ್ತಿದ್ದವರು ಪರಾರಿಯಾದರು. ಆ ಕುಟುಂಬದವರು ಅದನ್ನು ಯಾರು ನೀಡಿದ್ದಾರೆ ಎಂದು ಹೇಳದೇ ಇದ್ದ ಕಾರಣ ಚುನಾವಣಾಧಿಕಾರಿಗಳು ಆ ಒಂದು ಕುಕ್ಕರ್‌ ಅನ್ನು ವಶಪಡಿಸಿಕೊಂಡಿದ್ದಾರೆ.
ವಾರ್ಡ್‌ವಾರು ಮತದಾನದ ವಿವರ:- ವಾರ್ಡ್‌ 1- ಒಟ್ಟು ಮತದಾರರು 964 ಚಲಾಯಿತ ಮತಗಳು 755 (ಶೇ. 78.32), 2- 832/740 (88.94%), 3- 680/558 (82.06%), 4- 891/667 (67.31%), 5- 789/562 (71.23%), 6-937/753 (80.36%), 7- 749/593 (79.19%), 8- 683/536 (78.48%), 9- 870/678 (77.93%), 10- 689/577 (83.74%), 11- 831/667 (80.26%), 12- 656/548 (83.54%), 13- 657/511 (77.78%), 14- 574/431 (75.09%), 15- 875/622 (71.09%), 16- 551/425 (77.13%), 17- 849/722 (85.04%), 18- 746/573 (76.81%), 19- 898/660 (73.50%), 20- 836/674 (80.62%), 21- 786/590 (75.05%), 22- 1014/704 (69.43%), 23- 777/584 (75.16%).
ಹಳಿಯಾಳ ಪುರಸಭೆಯ 23 ಸದಸ್ಯ ಸ್ಥಾನಗಳಿಗೆ ಸ್ಪರ್ಧಿಸಿದ ಒಟ್ಟು 70 ಸ್ಪರ್ಧಿಗಳ ಭವಿಷ್ಯ ಮತ ಪೆಟ್ಟಿಗೆಗಳಲ್ಲಿ ಭದ್ರವಾಗಿದ್ದು, ಸೆಪ್ಟೆಂಬರ್‌ 3 ಸೋಮವಾರ ಮತ ಎಣಿಕೆ ನಡೆಯಲಿದೆ.

loading...