ಪುರಸಭೆ ತುರ್ತುಸಭೆ: ತಾರ್ಕಿಕ ಅಂತ್ಯಕಾಣದೇ ಮುಕ್ತಾಯ

0
28

ಕನ್ನಡಮ್ಮ ಸುದ್ದಿ-ಹಳಿಯಾಳ: ಪುರಸಭೆಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸೋಮವಾರ ನಡೆದ ಪುರಸಭೆಯ ತುರ್ತುಸಭೆಯಲ್ಲಿ ಚರ್ಚಿಸಲಾಯಿತು.
ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಉಪಸ್ಥಿತಿಯಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ಭ್ರಷ್ಟಾಚಾರದ ಗಂಭೀರ ಸಂಗತಿಯ ಬಗ್ಗೆ ಚರ್ಚೆ ನಡೆಯಿತು. ಆದರೆ ಕೆಲ ತಾಂತ್ರಿಕ ಸಮಸ್ಯೆಗಳ ಕಾರಣ ಸಭೆಯು ಯಾವುದೇ ತಾರ್ಕಿಕ ಅಂತ್ಯಕ್ಕೆ ಬರಲಾಗಲಿಲ್ಲ.
ವಸತಿ ಸಮಿತಿ ನಾಮನಿರ್ದೇಶಿತ ಸದಸ್ಯ ಗುಲಾಬಶ್ಯಾ ಲತೀಫನವರ ಅವರು ಪ್ರಾರಂಭದಲ್ಲಿ ಮಾತನಾಡುತ್ತಾ ನಿನ್ನೆ ಸಚಿವ ಆರ್‌.ವಿ. ದೇಶಪಾಂಡೆಯವರ ನಿವಾಸದಲ್ಲಿ ಆಗಿರುವ ವಿದ್ಯಮಾನದ ಬಗ್ಗೆ ಸಭೆಗೆ ವಿವರಿಸಿದರು. ಆಶ್ರಯಮನೆ ನೀಡಿಕೆ ವಿಷಯದಲ್ಲಿ ಇಬ್ಬರು ಫಲಾನುಭವಿಗಳು ಸಚಿವರ ಬಳಿ ತೆರಳಿ ತಮ್ಮಿಂದ ಹಣ ಪಡೆದಿರುವ ಸಂಗತಿಯನ್ನು ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ತಹಶೀಲ್ದಾರ ಹಾಗೂ ಪಿಎಸ್‌ಐ ಅವರಿಗೆ ಸೂಚಿಸಿರುವ ಬಗ್ಗೆ ಲತೀಫನವರ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಎಂಎಲ್‌ಸಿ ಎಸ್‌.ಎಲ್‌. ಘೋಟ್ನೇಕರ ಮಾತನಾಡುತ್ತಾ ಇತ್ತೀಚೆಗೆ ಹಲವು ವಿಷಯಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಪುರಸಭೆಯ ಹೆಸರು ಹಾಳಾಗುತ್ತಿದೆ. ಒಂದು ಕಾಲದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಗೌರವಾನ್ವಿತ ಸ್ಥಾನಮಾನದಲ್ಲಿದ್ದ ಪುರಸಭೆ ಹೀಗೆ ಹೆಸರು ಕೆಡಿಸಿಕೊಳ್ಳುವದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು. ಭ್ರಷ್ಟಾಚಾರದ ಕೆಟ್ಟ ಪದ್ಧತಿ ಮುಂದುವರಿಸದಂತಾಗಲು ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದಕ್ಕೆ ಅಧ್ಯಕ್ಷ ಶಂಕರ ಬೆಳಗಾಂವಕರ ಒಪ್ಪಿಗೆ ಸೂಚಿಸಿದರು. ಆದರೆ ಈ ವಿಷಯದ ಬಗ್ಗೆ ಠರಾವು ಮಾಡಲು ತಾಂತ್ರಿಕ ಅಡಚಣೆಗಳು ಇರುವ ಬಗ್ಗೆ ಮುಖ್ಯಾಧಿಕಾರಿ ಕೇಶವ ಚೌಗುಲೆ ಸಭೆಗೆ ತಿಳಿಸಿದರು.
ಮನೆ ನೀಡಲು ಹಣ ಪಡೆಯುವ ಬಗ್ಗೆ ಆರೋಪ ಕೇವಲ ವಸತಿ ಸಮಿತಿ ಸದಸ್ಯರು ಮಾತ್ರವಲ್ಲದೇ ಪುರಸಭೆಯ ಇತರ ಚುನಾಯಿತ ಸದಸ್ಯರ ಮೇಲೆಯೂ ಸಹ ಬರುತ್ತಿದ್ದು ಎಲ್ಲರ ಹೆಸರು ಹಾಳಾಗುತ್ತಿದೆ ಎಂದು ಗುಲಾಬಶ್ಯಾ ಲತೀಫನವರ ಹೇಳಿದ ಮಾತಿಗೆ ಪ್ರತಿಪಕ್ಷದವರಾದ ಹಿರಿಯ ಸದಸ್ಯ ಶ್ರೀಕಾಂತ ಹೂಲಿ ತಕ್ಷಣ ಪ್ರತಿಕ್ರಿಯಿಸಿದರು. ಪುರಸಭೆಗೆ ಸಂಬಂಧಪಟ್ಟ ವಿಷಯದ ಬಗ್ಗೆ ದೂರು ಸಚಿವ ಆರ್‌.ವಿ. ದೇಶಪಾಂಡೆಯವರ ವರೆಗೆ ಹೋಗಿದೆ ಎಂದರೆ ಈ ವಿಷಯದ ಗಂಭೀರತೆ ತಿಳಿಯಬಹುದಾಗಿದೆ. ಹಾಗೂ ಇದು ನಾವೆಲ್ಲರೂ ನಿಷ್ಕ್ರಿಯರಾಗಿದ್ದೇವೆ ಎಂದು ತೋರಿಸುತ್ತದೆ ಎಂದರು.
ವಸತಿ ವಿಭಾಗದ ಮುಖ್ಯಸ್ಥ ರಾಮಚಂದ್ರ ಮೋಹಿತೆ ಇವರು ಈ ವಿಷಯದ ಬಗ್ಗೆ ತನಗೆ ಮಾತನಾಡುವದಿದೆ ಎಂದು ಎರಡು ಸಲ ಕೋರಿದರೂ ಸಹ ಅವರ ಮಾತಿಗೆ ಸಭೆ ಅವಕಾಶ ನೀಡಲಿಲ್ಲ. ಮಾತ್ರವಲ್ಲದೇ ಮೋಹಿತೆಯವರು ಮಾತನಾಡಲಿ ಎಂದು ಇತರ ಯಾವುದೇ ಸದಸ್ಯರು ಸಭೆಗೆ ಆಗ್ರಹಿಸಲಿಲ್ಲ.
ಇದೇ ಸಂದರ್ಭದಲ್ಲಿ ಮನೆ ನಿರ್ಮಿಸಲು ನಿವೇಶನ ಅಭಿವೃದ್ಧಿ ಮಾಡಲು ನಿರಾಕ್ಷೇಪಣಾ ಪ್ರಮಾಣಪತ್ರ ನೀಡಿದ ಸಂಗತಿಯ ಬಗ್ಗೆಯೂ ಸಹ ಶ್ರೀಕಾಂತ ಹೂಲಿ ಉಲ್ಲೇಖಿಸಿದರು. ತಾನು ಹಾಜರಿದ್ದ ಸಭೆಯಲ್ಲಿ ಸದರಿ ಪ್ರಕರಣಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲು ಆಕ್ಷೇಪ ನಮೂದಿಸಲಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಸಭೆಯ ಗಮನಕ್ಕೆ ತರದೆಯೇ ಅವರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲಾಗಿದೆ. ಇದು ಭ್ರಷ್ಟಾಚಾರದ ಸಂಶಯಕ್ಕೆ ಕಾರಣವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಸ್ವತಃ ಎಂಎಲ್‌ಸಿ ಘೋಟ್ನೇಕರ ಅವರು ಸಹ ತಲೆದೂಗಿದರು. ಆದರೆ ವಿಚಿತ್ರವೆಂದರೆ ಈ ವಿಷಯದ ಬಗ್ಗೆ ಸಭೆಯಲ್ಲಿ ಹೆಚ್ಚಿನ ಚರ್ಚೆಯೇ ನಡೆಯಲಿಲ್ಲ!
ಭ್ರಷ್ಟಾಚಾರದ ಗಂಭೀರ ವಿಷಯದ ಬಗ್ಗೆ ಕರೆಯಲಾಗಿದ್ದ ಈ ತುರ್ತುಸಭೆಯು ಯಾವುದೇ ತಾರ್ಕಿಕ ಅಂತ್ಯವಿಲ್ಲದೇ ಸಮಾಪ್ತಿಯಾಯಿತು. ಉಪಾಧ್ಯಕ್ಷ ಅರುಣ ಬೋಬಾಟಿ, ಆರ್ಥಿಕ ಸ್ಥಾಯಿ ಸಮಿತಿ ಚೇರಮನ್‌ ಗಾಯತ್ರಿ ನೀಲಜಕರ ವೇದಿಕೆಯಲ್ಲಿದ್ದರು.
ವಸತಿ ಸಮಿತಿಯ ಸದಸ್ಯರಾದ ಜಿ.ಡಿ. ಗಂಗಾಧರ, ಪರಶುರಾಮ ಹರ್ಲಿ ಮತ್ತು ವಿಮಲಾ ಸಹದೇವ ವಡ್ಡರ್‌ ಹಾಗೂ ಇತರ ಸದಸ್ಯರಾದ ಮಾಧವಿ ಬೆಳಗಾಂವಕರ, ರಿಯಾನಾ ಬೆಟಗೇರಿ, ಮಂಜುಳಾ ಮಾನಗಾಂವಿ, ಮಾಲಾ ಬೃಗಾಂಜಾ, ಫಯಾಜ್‌ ಶೇಖ, ಇನಾಯತುಲ್ಲಾ ಬೇಪಾರಿ, ಸುರೇಶ ತಳವಾರ, ಸುಬಾನಿ ಹುಬ್ಬಳ್ಳಿ, ಸೈಯದಅಲಿ ಅಂಕೋಲೆಕರ, ಮುಖ್ಯಾಧಿಕಾರಿ ಕೇಶವ ಚೌಗುಲೆ ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.

loading...