ಪುಲ್ವಾಮ ದಾಳಿ; ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಹಿನ್ನಡೆ; ದಾಳಿ ಖಂಡಿಸಿದ ವಿಶ್ವಸಂಸ್ಥೆ

0
3

ನವದೆಹಲಿ:- ಪುಲ್ವಾಮ ಉಗ್ರರ ದಾಳಿಯ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್‌ಸಿ)ಯ ನಿರ್ಣಯವನ್ನು ಭಾರತ ಸ್ವಾಗತಿಸಿದ್ದು, ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರು ಮತ್ತು ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಲು ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾಗಿದೆ ಎಂದು ಹೇಳಿದೆ.

ತನ್ನ ನಿಯಂತ್ರಣದಲ್ಲಿರುವ ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳ ವಿರುದ್ಧ ಮತ್ತು ಪುಲ್ವಾಮಾ ದಾಳಿಗೆ ಜವಾಬ್ದಾರರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡವಿದೆ.
ಅಂತಾರಾಷ್ಟ್ರೀಯ ಕಾನೂನು ಮತ್ತು ಸಂಬಂಧಿತ ಭದ್ರತಾ ಮಂಡಳಿಯ ನಿರ್ಣಯಗಳ ಪ್ರಕಾರ, ಭಾರತದ ಸರಕಾರ ಮತ್ತು ಇತರ ಎಲ್ಲಾ ಸಂಬಂಧಿತ ಅಧಿಕಾರಿಗಳೊಂದಿಗೆ ಈ ನಿಟ್ಟಿನಲ್ಲಿ ಸಕ್ರಿಯವಾಗಿ ಸಹಕರಿಸಲು ಎಲ್ಲಾ ದೇಶಗಳಿಗೆ ಸೂಚನೆ ನೀಡಲಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಅಳವಡಿಸಿಕೊಂಡ ನಿರ್ಣಯದಿಂದ ದೆಹಲಿಗೆ ರಾಜತಾಂತ್ರಿಕ ಯಶಸ್ಸು ದೊರೆತಿದೆ ಮತ್ತು ಭಾರತದ ನಿಲುವಿಗೆ ಅನುಮೋದನೆ ಸಿಕ್ಕಿದೆ ಎಂದು ರಾಯಭಾರಿಯ ಮೂಲಗಳು ತಿಳಿಸಿವೆ. ಮಂಡಳಿಯ ಸಭೆಯಲ್ಲಿ ಚೀನಾ ಸೇರಿದಂತೆ ಶಾಶ್ವತ ಮತ್ತು ಶಾಶ್ವತವಲ್ಲದ ಸದಸ್ಯರು ಪಾಲ್ಗೊಂಡಿದ್ದರು.
ಜೈಶ್-ಇ-ಮುಹಮ್ಮದ್ ಮತ್ತು ಅಪರಾಧಿಗಳನ್ನು ನ್ಯಾಯದ ಎದುರು ತರುವುದು ಸೇರಿದಂತೆ “ಪಾಲುದಾರ ರಾಷ್ಟ್ರಗಳ ಮೂಲಕ ಭಾರತ ತನ್ನ ನಿಲುವುವನ್ನು ಮಂಡಿಸಿತು” ಎಂದು ಮೂಲಗಳು ತಿಳಿಸಿವೆ.
ನಿರ್ಣಯ ಮಂಡಿಸುವಲ್ಲಿ ಫ್ರಾನ್ಸ್ ಪ್ರಮುಖ ಪಾತ್ರವಹಿಸಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕ ಸೇರಿದಂತೆ ಇತರ ದೇಶಗಳು ಕೂಡ ಇದಕ್ಕೆ ಬೆಂಬಲ ನೀಡಿದವು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೇ ಅವರು ಉಗ್ರರ ವಿರುದ್ಧ ಕ್ರಮಕೈಗೊಳ್ಳಲು ಪಾಕಿಸ್ತಾನಕ್ಕೆ ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.
“ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ಭಾರತದೊಂದಿಗೆ ನಿಲ್ಲುತ್ತೇವೆ. ಅಂತಾರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿರುವ ಭಯೋತ್ಪಾದಕರಿಗೆ ಪಾಕಿಸ್ತಾನವು ಸುರಕ್ಷಿತ ಧಾಮವನ್ನು ಒದಗಿಸಬಾರದು” ಎಂದು ಮೈಕ್ ಪೊಂಪೇ ಟ್ವೀಟ್ ಮಾಡಿದ್ದಾರೆ.
ದಾಳಿ ನಡೆಸಿದ ದುಷ್ಕರ್ಮಿಗಳು, ಸಂಘಟಕರು, ಹಣಕಾಸು ಪೂರೈಕೆದಾರರು ಮತ್ತು ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವವರ ವಿರುದ್ಧ ಕ್ರಮಕೈಗೊಳ್ಳಲು ಭದ್ರತಾ ಮಂಡಳಿಯ ಸದಸ್ಯರು ಆಗ್ರಹಿಸಿದ್ದಾರೆ ಎಂದು ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

ಜೈಷೆ ಇ-ಮುಹಮ್ಮದ್‍ (ಜೆಇಎಂ) ನಡೆಸಿದ ಹೇಡಿಗಳ ಪುಲ್ವಾಮ ಆತ್ಮಹತ್ಯಾ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದೆ ಎಂದು ವಿದೇಶಾಂಗ ಖಾತೆಯ ವಕ್ತಾರ ರವೀಶ್‍ ಕುಮಾರ್ ಟ್ವೀಟ್‍ ಮಾಡಿದ್ದಾರೆ.

loading...