ಪ್ರಕೃತಿ ಮಾತೆ ಮುನಿಸಿಕೊಂಡರೆ ತಡೆಯಲು ಸಾಧ್ಯವಿಲ್ಲ: ಕುಲಕರ್ಣಿ

0
24

ಕನ್ನಡಮ್ಮ ಸುದ್ದಿ-ಧಾರವಾಡ: ಪ್ರಕೃತಿ ಮಾತೆ ತನ್ನ ಶಕ್ತಿ ಮೀರಿ ನಾವು ನೀಡಿದ ಎಲ್ಲ ನೋವುಗಳನ್ನು ಸಹಿಸಿಕೊಳ್ಳುತ್ತಾಳೆ. ಆದರೆ, ಒಮ್ಮೆ ಅವಳು ಮುನಿಸಿಕೊಂಡರೆ ಅವಳ ರೌದ್ರತೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಿವೃತ್ತ ಉಪ ಅರಣ್ಯ ಸಂರಕ್ಷಕ ಎಸ್.ಎನ್.ಕುಲಕರ್ಣಿ ಹೇಳಿದರು.
ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಓರಾಂಗುಟನ್ ದಿನಾಚರಣೆಯಲ್ಲಿ ಮಾತನಾಡಿ, ಕೊಡಗು ಮತ್ತು ಕೇರಳದಲ್ಲಿ ಅಗುತ್ತಿರುವ ಜಲ ಪ್ರಳಯ ಈ ಕ್ಷಣದ ಸಮಸ್ಯೆಯಲ್ಲ. ಆ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಕಾಡನ್ನು ಕಡಿದು ಕಾಫಿ ತೋಟಗಳನ್ನಾಗಿ ಮಾಡಲಾಗುತ್ತಿದೆ, ಅದರೊಂದಿಗೆ ಅರಣ್ಯ ಭುಮಿಯ ಒತ್ತುವರಿ, ಅಭಿವೃದ್ದಿ ಕಾರ್ಯಗಳು ಎಲ್ಲವೂ ಅರಣ್ಯ ನಾಶದಲ್ಲಿ ಕೊನೆಗೊಳ್ಳುತ್ತವೆ ಎಂದರು. ಈ ಬಾರಿ ಅಲ್ಲಿ ವಾಡಿಕೆಯಷ್ಟೇ ಮಳೆಯಾದರೂ, ಆ ಮಳೆಯ ರಭಸವನ್ನು ತಡೆದು, ದೊಡ್ಡ ದೊಡ್ಡ ಮರಗಳಿಂದ ಅದು ಇಳಿದು ನಂತರ ಕೆಳಗಿರುವ ತರಗಲೆಗಳು ಅದನ್ನು ರಭಸದಿಂದ ಹೋಗದಂತೆ ತಡೆದು, ಭೂಮಿಯಲ್ಲಿ ಅದನ್ನು ಇಂಗಿಸಿ, ಆ ಇಂಗಿದ ನೀರು ಹೆಚ್ಚಾದಾಗ ಸಣ್ಣ ಸಣ್ಣ ಝರಿಗಳ ಮೂಲಕ ಹರಿದು ನಿಧಾನವಾಗಿ ಹಳ್ಳ, ನದಿಗಳ ಮಖಾಂತರ ಸಮುದ್ರ ಸೇರುವ ಪ್ರಕ್ರಿಯೆಗೆ ಧಕ್ಕೆಯಾಗಿದೆ ಎಂದರು. ಈ ಬಾರಿಯ ಮಳೆ ನೇರವಾಗಿ ಕಾಡಿಲ್ಲದ ಎತ್ತರ ಪ್ರದೇಶಗಳಿಗೆ ನೇರವಾಗಿ ಬಿದ್ದು, ರಭಸದಿಂದ ಮಣ್ಣನ್ನು ಕೊಚ್ಚಿಕೊಂಡು ಹೊಗುತ್ತಿದ್ದು ಇದರ ರಭಸಕ್ಕೆ ಯಾವ ಮನೆ, ಅಣೆಕಟ್ಟುಗಳು ತಾಳುತ್ತಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಅರಣ್ಯ ನಾಶ. ಹೀಗಾಗಿ ದಟ್ಟ ಅರಣ್ಯ ಕಾಡುಗಳ ಕೃಷಿಕನಾದ ಓರಾಂಗುಟನ್ ದಿನಾಚರಣೆಯನ್ನು ಆಚರಿಸಿ, ಅಳಿವಿನಂಚಿನಲ್ಲಿರುವ ಆ ಪ್ರಾಣಿಯ ಬಗ್ಗೆ ಜಾಗ್ರತಿ ಮೂಡಿಸಿ ಎಂದರು.
ನೇಚರ್ ಫಸ್ಟ್ ಇಕೋ ವಿಲೇಜಿನ ಪ್ರಧಾನ ಸೇವಕ ಪ್ರಕಾಶ ಗೌಡರ ಮಾತನಾಡಿ, ಹಣ್ಣು, ಹೂವು, ಕಾಯಿ, ತೊಗಟೆ, ಎಲೆಗಳಷ್ಟೇ ಅಲ್ಲದೇ ಕೆಲವು ಮೊಟ್ಟೆಗಳನ್ನು ಸೇರಿ ಒಟ್ಟಾರೆ 300ಕ್ಕೂ ಹೆಚ್ಚು ವಿವಿಧ ತರಹದ ಆಹಾರವನ್ನು ತಿನ್ನುತ್ತವೆ. ಅದರಲ್ಲಿ ಅವುಗಳ ಮುಖ್ಯ ಆಹಾರ ಹಣ್ಣುಗಳು. ಇವು ನೂರಕ್ಕೂ ಹೆಚ್ಚಿನ ವಿವಿಧ ತರಹದ ಹಣ್ಣುಗಳನ್ನು ತಿಂದು, ತಮ್ಮ ಮಲದ ಮುಖಾಂತರ ಆ ಹಣ್ಣುಗಳ ಬೀಜಗಳು ಕಾಡಿನಾದ್ಯಂತ ಪಸಿರಿಸುವಂತೆ ಮಾಡುತ್ತವೆ ಎಂದರು. ಓರಾಂಗುಟನಗಳು ಅತಿ ವಿಶೇಷವಾದ ಗೂಡುಗಳನ್ನು ನಿರ್ಮಿಸುವಲ್ಲಿ ಖ್ಯಾತಿ ಹೊಂದಿವೆ. ಅವು ಪ್ರತಿನಿತ್ಯ ದೊಡ್ಡ ದೊಡ್ಡ ಮರಗಳಲ್ಲಿ ತಮ್ಮ ರಾತ್ರಿ ಗೂಡುಗಳನ್ನು ನಿರ್ಮಿಸುತ್ತವೆ. ಮರದ ಆಯ್ಕೆಯ ನಂತರ, ಮನೆಯ ತಳಪಾಯವನ್ನು ದೊಡ್ಡದಾದ ಮರಗಳ ಕೊಂಬೆಗಳನ್ನು ತನ್ನ ಕೆಳಗೆ ಹಾಗೂ ತನ್ನಡೆಗೆ ಎಳೆದುಕೊಂಡು ಮೊದಲ ಹಂತದ ಅಡಿಪಾಯ ಹಾಕುತ್ತದೆ ಎಂದರು. ಕೆ.ಪಿ.ಟಿ.ಸಿ.ಎಲ್ ನಿವೃತ್ತ ಅಭಿಯಂತರ ನಾಗೇಶ ಕಡಕೋಳ ಉಪಸ್ಥಿತರಿದ್ದರು. ಕುಮಾರ ಹಿರೇಮಠ ಸ್ವಾಗತಿಸಿದರು. ಕುಮಾರಿ ಜೀಯಾ ವಂದಿಸಿದರು.

loading...