ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ: ಪೌರಾಯುಕ್ತ ಅಭಿಜಿನ್

0
113

ಕಾರವಾರ: ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದರ ಮೂಲಕ ಪ್ಲಾಸ್ಟಿಕ್ ಮಾಲೀನ್ಯ ತಡೆಗಟ್ಟಲು ಸಾರ್ವಜನಿಕರು ನಗರಸಭೆ ಹಾಗೂ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿಯೊಂದಿಗೆ ಕೈ ಜೋಡಿಸಬೇಕು ಎಂದು ನಗರಸಭೆ ಪ್ರಭಾರಿ ಪೌರಾಯುಕ್ತ ಅಭಿಜಿನ್ ಹೇಳಿದರು.
ಅವರು ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಕರ್ನಾಟಕ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ-2018 ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಬಾರಿಯ ಪರಿಸರ ದಿನಾಚರಣೆಯ ಘೋಷ ವಾಕ್ಯ ಪ್ಲಾಸ್ಟಿಕ್ ಮಾಲೀನ್ಯ ತಡೆಗಟ್ಟೋಣ ಎಂಬುದಾಗಿದೆ. ನಗರದ ಹೊಟೆಲ್ ಮಾಲೀಕರು, ಮೀನು ಮಾರಾಟಗಾರರು ಹಾಗೂ ಅಂಗಡಿಕಾರರು ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ತ್ಯಜಿಸಬೇಕು. ಪ್ಲಾಸ್ಟಿಕ್‍ಗೆ ಪರ್ಯಾಯವಾಗಿ ಕಾಗದ ಅಥವಾ ಬಟ್ಟೆ ಚೀಲಗಳನ್ನು ಬಳಸಬೇಕು. ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ಸರಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಿಲ್ಲಾ ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿ ಡಾ.ವಿ.ಎನ್.ನಾಯಕ ಮಾತನಾಡಿ, ಸರಕಾರ ಕೈಗೊಳ್ಳುವ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ, ಜನರ ಸಹಭಾಗಿತ್ವ ಅತೀ ಅವಶ್ಯಕ. ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು. ಅದರ ಬದಲಾಗಿ ಪರಿಸರಕ್ಕೆ ಪೂರಕವಾದ ಕೈಚೀಲಗಳನ್ನು ಬಳಸಬೇಕು ಎಂದರು. ಬಳಿಕ ಪ್ಲಾಸ್ಟಿಕ್‍ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಪರಿಸರ ಅಕಾರಿ ವಿಜಯಾ ಹೆಗಡೆ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ-2018 ರ ಹಿನ್ನೆಲೆಯಲ್ಲಿ ಜಾಗತಿಕ ಸಂಸ್ಥೆಯಾದ ಯುಎನ್‍ಇಪಿ ಮೊದಲ ಬಾರಿಗೆ ಭಾರತದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಸಲು ಮುಂದಾಗಿದೆ. ಅದು ವಿಶ್ವಕ್ಕೆ ಪ್ಲಾಸ್ಟಿಕ್ ಮಾಲೀನ್ಯ ತಡೆಗಟ್ಟೋಣ ಎಂಬ ಘೋಷ ವಾಕ್ಯದ ಮೂಲಕ ಪರಿಸರ ಉಳಿಸಲು ಕರೆ ನೀಡಿದೆ ಎಂದರು. ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರು, ಹೊಟೆಲ್ ಮಾಲೀಕರು, ಬೀದಿ ಬದಿ ಅಂಗಡಿಕಾರರು, ವ್ಯಾಪಾರಿಗಳು ಸೇರಿದಂತೆ, ನೂರಾರು ಸಾರ್ವಜನಿಕರು ಹಾಜರಿದ್ದರು.
ಈ ಸಂದರ್ಭದಲ್ಲಿ ಸಹಾಯಕ ಪರಿಸರ ಅಧಿಕಾರಿ ಸೋಮಶೇಖರ್ ಹಿರೇಗೌಡರ್, ಹಿರಿಯ ಸದಸ್ಯರಾದ ಕೆ.ಟಿ.ತಾಂಡೇಲ್, ಎಂ.ಆರ್.ನಾಯ್ಕ, ನಗರಸಭೆ ಪರಿಸರ ಅಭಿಯಂತರ ಮಲ್ಲಿಕಾರ್ಜುನ್, ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಮೋಹನ್‍ರಾಜ್ ಉಪಸ್ಥಿತರಿದ್ದರು.

loading...