ಫಲಪ್ರದವಾಗದ ಮಾತೃಪೂರ್ಣ ಯೋಜನೆ

0
21

ಎ.ಎಚ್.ಖಾಜಿ
ಶಿರಹಟ್ಟಿ: ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾದ ಮಾತೃಪೂರ್ಣ ಯೋಜನೆ ಫಲಾನುಭವಿಗಳ ನಿರಾಸಕ್ತಿಯಿಂದಾಗಿ ಪ್ರಯೋಜನಕ್ಕೆ ಬಾರದಂತಾಗುತ್ತಿದೆ.
ಗರ್ಭಿಣಿಯರು ಹಾಗೂ ಬಾಣಂತಿಯರು ಊಟಕ್ಕಾಗಿ ಅಂಗನವಾಡಿಗೆ ಬರಲು ನಾನಾ ಕಾರಣಗಳಿಂದ ಹಿಂದೇಟು ಹಾಕುತ್ತಿರುವುದು ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗೆ ತಲೆನೋವಾಗಿದೆ.
ಅಂಗನವಾಡಿಗೆ ಊಟಕ್ಕೆ ಬನ್ನಿ ಎಂದರೆ ಫಲಾನುಭವಿಗಳು ಬೈಯುತ್ತಾರೆ. ಗುರಿ ಸಾಧನೆ ಮಾಡದಿದ್ದಲ್ಲಿ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕು. ಇದು ಮಾತೃಪೂರ್ಣ ಯೋಜನೆ ಜಾರಿಗೊಳಿಸುವಲ್ಲಿ ಶ್ರಮಿಸುತ್ತಿರುವ ಇಲಾಖೆ ಸಿಬ್ಬಂದಿ, ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತರ ಅಳಲು. ನಿರೀಕ್ಷಿತ ಪ್ರಮಾಣದ ಗುರಿ ತಲುಪಲು ಸಾಧ್ಯವಾಗದ ಹಿನ್ನಲೆಯಲ್ಲಿ ಸರಕಾರ ಮಾತೃಪೂರ್ಣ ಯೋಜನೆ ಸ್ಥಗಿತಗೊಳಿಸಲು ಚಿಂತನೆ ನಡೆಸಿರುವ ಮಧ್ಯೆಯೇ ರಾಜ್ಯದ ಕೆಲ ಮಹಿಳಾ ಮತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಅಂಗನವಾಡಿ ಸಿಬ್ಬಂದಿ ಭಿನ್ನ ಅಭಿಪ್ರಾಯಗಳು ವ್ಯಕ್ತಪಡಿಸಿದ್ದಾರೆ.
ಸರಕಾರ ಯೋಜನೆಯಲ್ಲಿ ಕೆಲ ಮಾರ್ಪಾಡು ಮಾಡಲಿ. ಇಲ್ಲವಾದಲ್ಲಿ ಯೋಜನೆಯನ್ನೇ ನಿಲ್ಲಿಸಲಿ. ಇಲಾಖೆಯ ಮೇಲಾಧಿಕಾರಿಗಳು, ಸಚಿವರ ಒತ್ತಡಕ್ಕೆ ಮಣಿದು ಏನೇ ಶ್ರಮಿಸಿದರೂ ಯೋಜನೆ ಫಲಪ್ರದವಾಗುತ್ತಿಲ್ಲ. ಮನೆ ಬಾಗಿಲಿಗೆ ಹೋಗಿ ಗರ್ಭಿಣಿಯರು, ಬಾಣಂತಿಯರನ್ನು ಅಂಗನವಾಡಿಗೆ ಊಟಕ್ಕೆ ಕಳುಹಿಸಿ ಎಂದರೆ ಮನೆ ಮಂದಿಯೆಲ್ಲ ಸೇರಿ ಸಿಬ್ಬಂದಿಯನ್ನು ಬೈಯ್ದು ಕಳುಹಿಸುತ್ತಾರೆ. ಬೇಕಿದ್ದರೆ ಸಹಿ ಹಾಕುತ್ತೇವೆ. ನೀವೇ ಎಲ್ಲವನ್ನು ತೆಗೆದುಕೊಳ್ಳಿ ಎನ್ನುತ್ತಾರೆ ಎಂಬುದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಇಲಾಖೆ ಅಧಿಕಾರಿಗಳು ಹೇಳಿಕೆ.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ನೀಡಲಾಗುತ್ತಿದೆ. ಮಾತೃಪೂರ್ಣ ಯೋಜನೆ ಅನುಷ್ಠಾನಕ್ಕೆ ಬಂದ ಮೇಲೆ ಗರ್ಭಿಣಿಯರು, ಬಾಣಂತಿಯರಿಗೆ ಕೂಡ ಅಡುಗೆ ಮಾಡಬೇಕಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ದಿನವಿಡೀ ಇದೇ ಕೆಲಸವಾಗಿದೆ. ಹೀಗಾದರೆ ಮಕ್ಕಳಿಗೆ ಶಿಕ್ಷಣ ನೀಡುವುದು ಹೇಗೆ ಇದರಿಂದ ಕಲಿಕೆಗೆ ಹಿನ್ನೆಡೆಯಾಗುವುದಿಲ್ಲವೇ ಎಂಬುದು ಅಂಗನವಾಡಿ ಶಿಕ್ಷಕಿಯೊಬ್ಬರ ಪ್ರಶ್ನೆ.
ಅಂಗನವಾಡಿ ಊಟಕ್ಕೆ ಕಳುಹಿಸಿ ಎಂದರೆ ನಿಮ್ಮ ಮಂತ್ರಿಗಳು, ಶಾಸಕರ ಮನೆಗಳಲ್ಲಿರುವ ಗರ್ಭೀಣಿಯರು, ಬಾಣಂತಿಯರನ್ನು ಮೊದಲು ಅಂಗನವಾಡಿಗೆ ಕರೆತನ್ನಿ. ಆಮೇಲೆ ನಾವು ಬರುತ್ತೇವೆ ಎಂದು ನಿಂದಿಸುತ್ತಾರೆ. ಮನವೊಲಿಸಲು ಹೋದ ಅಂಗನವಾಡಿ ಸಿಬ್ಬಂದಿ ಕೆಲ ಗ್ರಾಮಗಳಲ್ಲಿ ಕಣ್ಣೀರು ಹಾಕಿ ವಾಪಸ್ ಬಂದಿದ್ದೇವೆ. ಸರಕಾರವೇನೋ 8 ತಿಂಗಳು ತುಂಬಿದ ಗರ್ಭೀಣಿ, ಒಂದೂವರೆ ತಿಂಗಳ ಬಾಣಂತಿ, ಸಿಜೇರಿಯನ್ ಆದವರಿಗೆ ಮನೆಗೆ ಊಟ ನೀಡುವಂತೆ ಸೂಚಿಸಿದೆ. ಆದರೆ, ಉಳಿದವರು ಅಂಗನವಾಡಿಗೆ ಬನ್ನಿ ಎಂದರೆ ಬೈಗುಳ ಕೇಳಬೇಕಾದ ಸ್ಥಿತಿ ಕೆಲವಡೆ ಇನ್ನೂ ಇದೆ ಎನ್ನುತ್ತಾರೆ ಹೆಸರು ಹೆಳದ ಸಹಾಯಕಿಯೊಬ್ಬರು.
ಅಂಗನವಾಡಿಯ ಮೂಲ ಅಶಯವೇ ಮರೆಯಾಗುತ್ತಿದೆ. ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿಲ್ಲ. ಹೇಗೋ ಮನೆಗಳಿಗೆ ಆಹಾರ ತಯಾರಿಸಿ ನೀಡುತ್ತಿದ್ದೇವೆ. ಈ ಬದಲು ಮನೆಗಳಿಗೆ ಆಹಾರ ಪದಾರ್ಥಗಳನ್ನು ನೀಡಿದರೆ ಅವರೇ ಮನೆಯಲ್ಲಿ ತಯಾರಿಸಿಕೊಳ್ಳುತ್ತಾರೆ. ಕೆಲವಡೆ ಅಂಗನವಾಡಿಯಿಂದ ನೀಡಿದ ಅಹಾರವನ್ನು ಗರ್ಭಿಣಿಯರು, ಬಾಣಂತಿಯರಿಗೆ ನೀಡುತ್ತಿಲ್ಲ ಎಂಬ ದೂರುಗಳಿವೆ. ಅಧಿಕಾರಿಗಳಿಗೆ ವಾಸ್ತವ ಸ್ಥಿತಿ ಹೇಳಿದರೆ ಒಪ್ಪಿಕೊಳ್ಳುವದಿಲ್ಲ. ಹೀಗಾಗಿ ನಾವೂ ರಾಮ-ಕೃಷ್ಣನ ಲೆಕ್ಕ ತೋರಿಸಬೇಕಾದ ಸ್ಥಿತಿ ಇದೆ ಎಂಬುದು ಇಲಾಖೆ ಅಧಿಕಾರಿಯೊಬ್ಬರ ಮಾತು.
ಯೋಜನೆ ಸದುದ್ದೇಶದಿಂದ ಕೂಡಿದೆ. ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರುವ ಮುನ್ನ ತಳ ಮಟ್ಟದಿಂದ ಅಧ್ಯಯನ ಮಡಬೇಕಿತ್ತು. ಕೆಲ ಅಂಗನವಾಡಿಗಳಲ್ಲಿ ನೀರಿಲ್ಲ, ಶೌಚಾಲಯವಿಲ್ಲ. ಗರ್ಭೀಣಿಯರು, ಬಾಣಂತಿಯರು ಬಂದರೆ ಕೂರಲು ಸ್ಥಳವೇ ಇಲ್ಲ. ಸಿಬ್ಬಂದಿಯೂ ಒತ್ತಡದಿಂದ ಕಾರ್ಯನಿರ್ವಹಿಸಬೇಕಿದೆ. ಸರಕಾರ ಮೊದಲು ಅಂಗನವಾಡಿಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕಾಗಿದೆ.

loading...