ಬರ ಪರಿಸ್ಥಿತಿ ಕುರಿತು ಸಮಗ್ರ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ

0
23

ಕನ್ನಡಮ್ಮ ಸುದ್ದಿ-ಕೊಪ್ಪಳ: ಪ್ರಕೃತಿ ವಿಕೋಪದಿಂದ ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಖುದ್ದು ವಿಕ್ಷಣೆ ಮಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸರ್ಕಾರ ಬರ ಪರಿಸ್ಥಿತಿ ನಿರ್ವಹಣೆಗೆ ಬದ್ಧವಾಗಿದ್ದು ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದ್ದಾರೆ.
ಬುಧವಾರ ಬಕ್ರೀದ್ ಹಬ್ಬದ ನಿಮಿತ್ತ ಸರ್ಕಾರಿ ರಜೆ ಇದ್ದರು ಸಹ ಕಂದಾಯ ಮಂತ್ರಿ ದೇಶಪಾಂಡೆ ಅವರು ಜಿಲ್ಲೆಯ ಶಾಸಕರು, ಸಂಸದರು, ಅಧಿಕಾರಿಗಳೊಂದಿಗೆ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ, ತಳಕಲ್, ಹಾಗೂ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮಗಳಲ್ಲಿ ರೈತರ ಹೊಲಗಳಿಗೆ ತೆರಳಿ ಮಳೆ ಕೊರತೆಯಿಂದ ಬೆಳೆ ಹಾನಿಯಾಗಿರುವ ಬಗ್ಗೆ ವಿಕ್ಷಣೆ ಮಾಡಿ ನಂತರ ಭಾನಾಪುರ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಮಾಹಿತಿಯನ್ನು ಪಡೆದುಕೊಂಡರು.ಬರ ಪರಿಸ್ಥಿತಿ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳ ವಿಡಿಯೋ ಕಾನ್ಫರೆನ್ಸ್ ನಡೆಸಿ ಆಯಾ ತಾಲೂಕುಗಳಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಅವರಿಗೆ ಸಚಿವರು ಸೂಚನೆ ನೀಡಿದರು. ಬೆಳೆಗಿಂತ ಕುಡಿಯುವ ನೀರು ಬಹಳ ಮುಖ್ಯ. ಜಾನುವಾರುಗಳಿಗೆ ಮೇವು, ನೀರಿನ ಸೌಲಭ್ಯ ಅಗತ್ಯವಾಗಿದೆ ಎಂದರು. ಜಿಲ್ಲೆಯಲ್ಲಿ ಆಗಿರುವ ಬೆಳೆ ನಾಶದ ಬಗ್ಗೆ ಸಂಪೂರ್ಣ ಸಮೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜನರು ಗುಳೆ ಹೋಗದಂತೆ ತಡೆದು ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕು. ಸರ್ಕಾರಕ್ಕೆ ಹಣದ ಕೊರತೆ ಇಲ್ಲ, ಹೀಗಾಗಿ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು. ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಸಮಸ್ಯೆ ತಿಳಿಯುವುದಿಲ್ಲ. ಎಲ್ಲಾ ತಾಲೂಕು ಹೋಬಳಿ ಗ್ರಾಮಗಳಿಗೆ ಭೇಟಿ ನೀಡಿ ಮೇಲಾಧಿಕಾರಿಗಳು ಮಾಹಿತಿ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಬರ ಪರಿಸ್ಥಿತಿ ಬಗ್ಗೆ 29ರೊಳಗೆ ವರದಿ : ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆವರಿಸಿಕೊಂಡಿದೆ. ಅಂತರ್ಜಲ ಬತ್ತಿ ಹೋಗಿರುವುದರಿಂದಾಗಿ ಬೋರ್ವೆಲ್ ನವೀಕರಣ ಮಾಡಬೇಕಾಗಿದೆ. ಎಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆಯೋ ಅಲ್ಲಿ ಪೈಪ್ಲೈನ್ ಕಾಮಗಾರಿ ನಡೆಯಬೇಕಾಗಿದೆ. ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ 29ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವುಂತೆ ತಿಳಿಸಿದ್ದಾರೆ.ಬರಗಾಲ ವೀಕ್ಷಣೆ: ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯಾದ್ಯಂತ ಆವರಿಸಿರುವ ಬರಗಾಲವನ್ನು ವೀಕ್ಷಣೆ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಬಳಿಯ ಹಲಗೇರಿ ಗ್ರಾಮದ ದ್ಯಾಮಪ್ಪ ಹಳ್ಳಿಕೇರಿ ಎಂಬುವವರು ತಮ್ಮ 8 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಆದ್ರೆ ಮಳೆ ಇಲ್ಲದ ಕಾರಣ ಮೆಕ್ಕೆಜೋಳ ಒಣಗಿದ್ದು, ರೈತ ಕಂಗಾಲಾಗಿದ್ದಾರೆ. ರೈತನ ಹೊಲಕ್ಕೆ ಭೇಟಿ ನೀಡಿದ ಸಚಿವ ದೇಶಪಾಂಡೆ ಒಣಗಿದ ಮೆಕ್ಕೆಜೋಳವನ್ನು 5 ನಿಮಿಷ ವೀಕ್ಷಣೆ ಮಾಡಿದರು. ನಂತರ ಅಧಿಕಾರಿಗಳಿಗೆ ಬೆಳೆ ನಷ್ಟದ ಬಗ್ಗೆ ಸರ್ವೆ ಮಾಡಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು. ಸಚಿವರು ಬೇಕಾಬಿಟ್ಟಿ ಬರ ವೀಕ್ಷಣೆ ಮಾಡಿದ್ದಾರೆಂದು ಸ್ಥಳೀಯರು ಅಸಮಾಧಾನ ಹೊರಹಾಕಿದರು.
ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ, ಅಮರೇಗೌಡ ಬಯ್ಯಾಪೂರ, ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಉಪವಿಭಾಗಾಧಿಕಾರಿ ಸಿ.ಡಿ.ಗೀತಾ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.

loading...