ಬಹಿಷ್ಕರಾಕ್ಕೊಳಗಾದ ಕುಟುಂಬಗಳ ಅಳಲು

0
7

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಉಪ್ಪಿನಪಟ್ಟಣದಲ್ಲಿ ಅಂಬಿಗ ಸಮಾಜದ 9 ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರ ಹಾಕಿದ ಸಂಗತಿ ಮಾದ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಗಮನಿಸಿದ ಬಹಿಷ್ಕರಾಕ್ಕೊಳಗಾದ ಇತರೆ ಕುಟುಂಬಗಳು ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವುದರಿಂದ ದಿನಕ್ಕೊಂದು ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುವಂತಾಗಿದೆ.
ತಾಲೂಕಿನ ಹೆಗಡೆಯ ಅಂಬಿಗರಕೇರಿಯಲ್ಲಿ ಮತ್ತೊಂದು ಕುಟುಂಬ 6 ವರ್ಷಗಳಿಂದ ಸಮಾಜದಿಂದ ಬಹಿಷ್ಕಾರಕ್ಕೊಳ್ಪಟ್ಟು, ನೋವು ಅನುಭವಿಸುವಂತಾಗಿದೆ. ಬಲಿಯಮ್ಮ ಅಂಬಿಗ ಎಂಬವರ ಕುಟುಂಬ ಬಹಿಷ್ಕಾರಕ್ಕೊಳಗಾಗಿದೆ. ಗಂಡನೊಡನೆ ವೈಮನಸ್ಸಿಗೀಡಾಗಿ ಬಾಳ್ವೆ ಮಾಡಲಾಗದ ಮಗಳನ್ನು ಮನೆಗೆ ತಂದಿರಿಸಿಕೊಂಡಿದ್ದೇ ಈ ಕುಟುಂಬ ಮಾಡಿದ ಅಪರಾಧವೆನ್ನಲಾಗಿದೆ. ಕೋರ್ಟ್‌ಗೆ ಹೋಗಿ ಸಮಸ್ಯೆ ಬಗೆಹರಿಸಿ ಮನೆಗೆ ಕರೆದುಕೊಂಡು ಹೋಗಿ ಎಂದರೆ ನೀವು ನ್ಯಾಯ ತೀರ್ಮಾನವನ್ನು ಮಾಡಿ ಮಗಳನ್ನು ಕಳುಹಿಸಿಕೊಡಿ ಎನ್ನುತ್ತಾರೆ. ಮಗನ ಮದುವೆ ಮಾಡಬೇಕು ಈಗಲಾದರೂ ಆದಷ್ಟು ಬೇಗ ನ್ಯಾಯ ತೀರ್ಮಾನ ಮಾಡಿ ಎಂದರೆ ಈಗ ಮಾಡಲು ಆಗುವುದಿಲ್ಲ ಎಂದು ನ್ಯಾಯ ಪಂಚಾಯಿತಿಯಲ್ಲಿ ಹೇಳುತ್ತಾರೆ. ನೀರು ಕೇಳಿದರೆ ನೀರು ಕೊಡುವುದಿಲ್ಲ. ಪೇಟೆಗೆ ಮೀನು ತರಲು ಹೋದರೆ ಮೀನು ಕೊಡಲು ಕೂಡ ಹಿಂದೆ ಮುಂದೆ ನೋಡುತ್ತಾರೆ. ಸಮಾಜದ ಕೆಲ ಸಂಬಂದಿಕರನ್ನು ಬಿಟ್ಟರೆ ಮತ್ತೆಲ್ಲರೂ ಅವರ ಜೊತೆ ಮಾತನಾಡಬೇಡಿ ಎಂದು ಹೇಳುವವರೇ ಆಗಿದ್ದಾರೆ. ಮಗನ ಮದುವೆಯನ್ನು ಹೇಗೋ ಮಾಡಿದ್ದೀವಿ ಇನ್ನು ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಅವರ ಮದುವೆ ಮಾಡಿಸಲು ತೊಂದರೆಯಾಗುತ್ತದೆ, ಆದಷ್ಟು ಬೇಗ ತೀರ್ಮಾನ ಕೊಡಿ ಎಂದು ಯಜಮಾನನಲ್ಲಿ ಮೀಟಿಂಗ ನಡೆದಾಗ ಕೇಳಿದರೆ ಮತ್ತೆ ತೀರ್ಮಾನ ಕೊಡಲು ಸಾಧ್ಯವಾಗುವುದಿಲ್ಲ ಎಂಬ ಅದೇ ಉತ್ತರ ನೀಡುತ್ತಾರೆಂದು ಬಲಿಯಮ್ಮ ತಮ್ಮ ಅಳಲನ್ನು ತೋಡಿಕೊಂಡರು.
21ನೇ ಶತಮಾನದ ಆಧುನಿಕ ಯುಗದಲ್ಲಿ ಇಂಥ ಅನಿಷ್ಠ ಪದ್ದತಿ ಜಾರಿಯಲ್ಲಿರುವುದು ಸುಶಿಕ್ಷಿತ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಸಮಾಜದ ಮುಖಂಡರಿಗೆ ಯಾವತ್ತು ಬುದ್ದಿ ಬರುತ್ತದೆಯೋ ಎಂಬುದು ವಿದ್ಯಾವಂತ ಯುವಕರ ಪ್ರಶ್ನೆಯಾಗಿದೆ. ಒಟ್ಟಾರೆ ಇಂತಹ ಬಹಿಷ್ಕಾರದಂತಹ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿರುವುದು ನಿಜಕ್ಕೂ ಪ್ರಜ್ಞಾವಂತ ನಾಗರಿಕರು ಗಂಭೀರವಾಗಿ ಚಿಂತಿಸಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇಂಥ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ಪರಿಹರಿಸಬೇಕಾಗಿದೆ.

loading...