ಬಿಕೋ ಎನ್ನುತ್ತಿರುವ ಮಿರ್ಜಾನ ಗ್ರಾಪಂ ಕಟ್ಟಡ

0
21

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಮಿರ್ಜಾನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪದ ರಸ್ತೆ ಕಾಮಗಾರಿ ನಡೆಸುತ್ತಿರುವ ಐ ಆರ್‌ ಬಿ ಕಂಪನಿಯವರು ಮಿರ್ಜಾನ ಗ್ರಾಮ ಪಂಚಾಯತ ಅಂಗಡಿ ಮಳಿಗೆದಾರರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಹಿಟಾಚಿಯಿಂದ ಅಂಗಡಿ ನೆಲಸಮಕ್ಕೆ ಮುಂದಾಗಿ ದುಂಡಾವರ್ತನೆ ಪ್ರದರ್ಶಿಸಿದ್ದರಿಂದ ಅಂಗಡಿಕಾರರ ಬದುಕು ಬೀದಿಗೆ ಬಂದು ನಿಂತಿದೆ.
ಈ ಸಮಯ ಐಆರ್‌ಬಿಯ ಅಧಿಕಾರಿಗಳಲ್ಲಿ ಅಂಗಡಿಕಾರರು ಒಂದು ವಾರ ಸಮಯಾವಕಾಶ ನೀಡುವಂತೆ ಪರಿ ಪರಿಯಾಗಿ ಮನವಿ ಮಾಡಿಕೊಂಡರೂ ಜಗ್ಗದ ಐಆರ್‌ಬಿಯ ಅಧಿಕಾರಿಗಳು ಮಾನವೀಯತೆ ಮರೆತು ಸರ್ವಾಧೀಕಾರಿಯಂತೆ ಅಂಗಡಿಯನ್ನು ಬಲವಂತವಾಗಿ ಮುಚ್ಚಿಸಿ ಅಂಗಡಿಯ ಮೆಟ್ಟಿಲುಗಳನ್ನು ಹಿಟಾಚಿಯಂದ ಕಿತ್ತೆಸೆದು ಭಯದ ವಾತಾವರಣ ಸೃಷ್ಟಿಸಿದಲ್ಲದೇ, ಎರಡೇ ದಿನದಲ್ಲಿ ಅಂಗಡಿ ಖಾಲಿ ಮಾಡಲು ತಿಳಿಸಿದ್ದು, ನೋಡಿದರೆ ಇದು ಪ್ರಜಾಪ್ರಭುತ್ವದ ರಾಷ್ಟ್ರವೇ ಎಂದು ಅನುಮಾನ ಮೂಡಲಾರಂಭಿಸುತ್ತದೆ ಎಂದು ಅಂಗಡಿಕಾರರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ. ಐಆರ್‌ಬಿ ಕಂಪನಿಯವರು ಚತುಷ್ಪದ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಂದಿನಿಂದಲೂ ಅಂಗಡಿ 6 ತಿಂಗಳಲ್ಲಿ ಹೋಗುತ್ತದೆ, 3 ತಿಂಗಳಲ್ಲಿ ಹೋಗುತ್ತದೆ ಅಂತ ಟೇಪ್‌ ಹಿಡಿದು ಅಳತೆ ಮಾಡುತ್ತಿದ್ದರಿಂದ ಅಂಗಡಿಕಾರರು ಐದು ವರ್ಷಗಳ ಕಾಲ ಭಯದ ನೆರಳಲ್ಲೇ ದಿನ ದೂಡುತ್ತಿದ್ದರು. ಇಂತಿಷ್ಟೇ ಸಮಯದಲ್ಲಿ ಅಂಗಡಿ ಖಾಲಿ ಮಾಡಲೇಬೇಕು ಎಂದು ಸೂಚನೆ ನೀಡಿದ್ದೇ ಆದಲ್ಲಿ ನಾವು ಅಂಗಡಿಯನ್ನು ಖಾಲಿ ಮಾಡುತ್ತಿದ್ದೆವು. ನಮ್ಮ ಪರಿಸ್ಥಿತಿ ಇವರಿಗೆ ಬಂದರೆ ಹೇಗಾಗುತ್ತಿತ್ತು ಎಂದು ನೊಂದು ನುಡಿಯುತ್ತಾರೆ. ಅಂಗಡಿ ಖಾಲಿ ಮಾಡುವ ಪರಿವೆ ಇಲ್ಲದ ನಾವು ಚೌತಿ ಹಬ್ಬಕ್ಕಾಗಿ ಹೆಚ್ಚುವರಿ ಸಾಮಾನು ಸಾಮಗ್ರಿ ಖರೀದಿಸಿದ್ದೇವು. ಅಂಗಡಿ ಖಾಲಿ ಮಾಡುವ ಮುನ್ಸೂಚನೆ ಎರಡು ತಿಂಗಳ ಮುಂಚಿತವಾಗೇ ನೀಡಿದಲ್ಲಿ ನಾವು ಹೆಚ್ಚವರಿ ಸಾಮಗ್ರಿ ಖರೀದಿಸುತ್ತಿರಲಿಲ್ಲ ಎಂಬುದು ಅಂಗಡಿಕಾರರ ಮನದಾಳದ ನೋವಾಗಿದೆ. ಭೂಸ್ವಾಧೀನಕ್ಕೊಳಪಡುವ ಕಟ್ಟಡದ ಕೆಲ ಭಾಗವನ್ನಷ್ಟೇ ಯಂತ್ರ ಮೂಲಕ ತೆಗೆಯಿಸಿ ಉಳಿದ ಭಾಗವನ್ನು ಬಳಸಿ 15 ದಿನದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಅಂಗಡಿ ಮಳಿಗೆದಾರರು ಮಿರ್ಜಾನ ಗ್ರಾಮ ಪಂಚಾಯತನಲ್ಲಿ ಬೇಡಿಕೆ ಇಟ್ಟಿದ್ದಾರೆ. ಅಂಗಡಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ 9 ಕುಟುಂಬದ ವ್ಯಾಪಾರಸ್ಥರಿಗೆ ಶೀಘ್ರದಲ್ಲೇ ಅಂಗಡಿ ನಿರ್ಮಿಸಿಕೊಟ್ಟು ಅವರ ಜೀವನ ಹಸನಾಗಿಸಲು, ಮಿರ್ಜಾನ ಗ್ರಾಮಾಡಳಿತ ಶೀಘ್ರದಲ್ಲೇ ಮುಂದಾಗಬೇಕಿದೆ.

loading...