ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು : ಯಡಿಯೂರಪ್ಪ-ಅಶೋಕ್ ಸಭೆ

0
9

ಬೆಂಗಳೂರು :ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿ ಪಾಳಯದಲ್ಲಿ ಕಸರತ್ತು ಜೋರಾಗಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸ ಇಂದು ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿ ಮಾರ್ಪಟ್ಟಿತ್ತು.

ಯಡಿಯೂರಪ್ಪ ನೇತೃತ್ವದಲ್ಲಿ ಆರ್.ಅಶೋಕ್ ಹಾಸನ, ಮಂಡ್ಯ, ದಾವಣಗೆರೆ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಿದರು.

ಸಭೆಯಲ್ಲಿ ಹಾಸನ ಶಾಸಕ ಪ್ರೀತಮ್ ಗೌಡ, ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಸಚಿವ ಎ.ಮಂಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ಸಭೆಯಲ್ಲಿ ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರುವ ಬಗ್ಗೆ ಚರ್ಚಿಸಲಾಯಿತು. ಹಾಸನದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ವಿರುದ್ಧ ಸಿಡಿದೆದ್ದಿರುವ ಮಂಜು, ಚುನಾವಣೆಯಲ್ಲಿ ಜೆಡಿಎಸ್‍ ಪಕ್ಷಕ್ಕೆ ಬೆಂಬಲಿಸದಿರಲು ನಿರ್ಧರಿಸಿದ್ದು, ಕೆಲವು ದಿನಗಳ ಹಿಂದೆ ಬಿಜೆಪಿ ಸೇರುವ ಸೂಚನೆ ನೀಡಿದ್ದರು. ಅದರಂತೆ ಇಂದು ಯಡಿಯೂರಪ್ಪರನ್ನು ಭೇಟಿ ಮಾಡಿ ಸೇರ್ಪಡೆ ಕುರಿತು ಚರ್ಚೆ ನಡೆಸಿದರು. ಹಾಸನ ಕ್ಷೇತ್ರದಿಂದ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದ್ದು, ಜೆಡಿಎಸ್ ವಿರುದ್ಧ ಮಂಜು ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷಗಳಿಗೆ ತಿರುಗೇಟು ನೀಡಲು ಬಿಜೆಪಿ ರಣತಂತ್ರ ರೂಪಿಸಿದ್ದು, ಈ ಕುರಿತು ಯಡಿಯೂರಪ್ಪ ನೇತೃತ್ವದಲ್ಲಿ ಚರ್ಚೆ ನಡೆಸಲಾಗಿದೆ.

ದಾವಣಗೆರೆ ಜಿಲ್ಲೆಯಿಂದ ಮರು ಆಯ್ಕೆ ಬಯಸಿರುವ ಸಂಸದ ಜಿ.ಎಂ.ಸಿದ್ದೇಶ್ವರ್, ಕ್ಷೇತ್ರದ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು. ಅಲ್ಲದೇ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಅವರನ್ನು ಕಣಕ್ಕಿಳಿಸಲು ಆರ್.ಅಶೋಕ್ ಮುಂದಾಗಿದ್ದು, ತೇಜಸ್ವಿನಿ ಸ್ಪರ್ಧೆಯ ಸಾಧಕ ಬಾಧಕಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಮಂಡ್ಯ ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳ ಕಿತ್ತಾಟದಿಂದ ಬಿಜೆಪಿಗೆ ಲಾಭವಾಗಲಿದ್ದು, ಸುಮಲತಾ ಅಂಬರೀಷ್ ಅವರ ಸ್ಪರ್ಧೆಯಿಂದ ಹಾಗೂ ಸುಮಲತಾಗೆ ಬೆಂಬಲ ನೀಡುವುದರಿಂದ ಪಕ್ಷಕ್ಕಾಗುವ ಲಾಭ ನಷ್ಟದ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಲಾಯಿತು. ಈಗಾಗಲೇ ಅತೃಪ್ತ ಮೈತ್ರಿ ಪಕ್ಷದ ಜಿಲ್ಲಾ ನಾಯಕರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದು, ಮಂಡ್ಯ ಜಿಲ್ಲೆಯಲ್ಲಿ ಕಮಲವನ್ನು ಅರಳಿಸುವ ಕುರಿತು ಯಡಿಯೂರಪ್ಪ-ಅಶೋಕ್ ಮಹತ್ವದ ಚರ್ಚೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಆರ್.ಅಶೋಕ್, ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಯಡಿಯೂರಪ್ಪ ತಮಗೆ ವಹಿಸಿದ್ದರಿಂದ ಪಕ್ಷವನ್ನು ಗಟ್ಟಿಗೊಳಿಸುವ ಬಗ್ಗೆ ತಾವು ಕಾರ್ಯಪ್ರವೃತ್ತರಾಗಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆ, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಕುರಿತು ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲಾಗಿದೆ.

ಬೆಂಗಳೂರು ದಕ್ಷಿಣ ಮತ್ತು ಮಂಡ್ಯ ಕ್ಷೇತ್ರಗಳ ಬಗ್ಗೆ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಲಾಗಿದ್ದು, ಮಂಡ್ಯದಿಂದ ಯಾರು ಸ್ಪರ್ಧಿಸಬೇಕು ಎನ್ನವುದನ್ನು ಪಕ್ಷದ ರಾಷ್ಟ್ರೀಯ ವರಿಷ್ಠರು ತೀರ್ಮಾನಿಸುತ್ತಾರೆ. ಕಳೆದ ಬಾರಿ ಮಂಡ್ಯದಲ್ಲಿ ಬಿಜೆಪಿಗೆ ಎರಡೂವರೆ ಲಕ್ಷ ಮತಗಳು ಬಂದಿದ್ದು, ಈ ಬಾರಿ ಇನ್ನೂ ಒಂದು ಲಕ್ಷ ಮತಗಳು ಹೆಚ್ಚಾಗಿ ಬರುವ ಸಾಧ್ಯತೆಯಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

ಹಾಸನದಿಂದ ಕಣಕ್ಕಿಳಿಸಬಹುದಾದ ಅಭ್ಯರ್ಥಿಯ ಬಗ್ಗೆ ಶಾಸಕ ಪ್ರೀತಂಗೌಡ ಅವರು ರಾಜ್ಯಾಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದಾರೆ. ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 22 ರಿಂದ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸುಮಲತಾ ಅಂಬರೀಷ್ ವಿರುದ್ಧ ಸಚಿವ ಎಚ್.ಡಿ.ರೇವಣ್ಣ ಅವಹೇಳನಕಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನ ದೇವೇಗೌಡ ಅವರ ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ. ಮಹಿಳೆಯ ಬಗ್ಗೆ ರೇವಣ್ಣ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ಪಕ್ಷ ಚಿಂತನೆ ನಡೆಸಿದ್ದು, ಈ ಬಗ್ಗೆ ಸುಮಲತಾ ಅವರ ಜೊತೆ ಮಾತುಕತೆ ನಡೆಸಬೇಕಿದೆ. ನಾಳೆಯೂ ಸಹ ಮಂಡ್ಯ ಬಗ್ಗೆ ಯಡಿಯೂರಪ್ಪ ಅವರ ಜೊತೆ ಸಭೆ ಮುಂದುವರೆಯಲಿದ್ದು, ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಧೂಳಿಪಟವಾಗುವುದು ನಿಶ್ಚಿತ ಎಂದು ಅವರು ಭವಿಷ್ಯ ನುಡಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಅಶೋಕ್ ತಿಳಿಸಿದರು.

loading...