ಬಿತ್ತನೆಗೆ ಅಣಿಯಾದ ರೈತ : ಕೃಷಿ ಇಲಾಖೆಯಲ್ಲಿಲ್ಲಾ ಬೀಜ !

0
37

ಎ.ಎಚ್.ಖಾಜಿ

ಶಿರಹಟ್ಟಿ: ಸತತ ಭೀಕರ ಬರಗಾಲದಿಂದ ತತ್ತರಿಸಿರುವಂತಹ ರೈತ ಸಮೂಹವು ಇತ್ತೀಚೆಗೆ ಕೆಲವು ದಿನಗಳಿಂದ ಸುರದ ಮಳೆಯು ಕೃಷಿ ಚಟುವಟಿಕೆಗಳಿಗೆ ಮರುಜೀವ ನೀಡಿದಂತಾಗಿದ್ದು, ಬರದ ಸಂಕಷ್ಟದ ಸಂಕೋಲೆಯಿಂದ ವಿಮೋಚನೆ ಪಡೆಯುವುದಕ್ಕಾಗಿ ಮರಳಿ ಯತ್ನವ ಮಾಡು ಎಂಬಂತೆ ರೈತರು ಹಳೆಯದನ್ನು ಮರೆತು ಹೊಸದಾಗಿ ಬಿತ್ತನೆ ಮಾಡಲು ಅಣಿಯಾಗುತ್ತಿದ್ದರೆ ಇತ್ತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾತ್ರ ಇನ್ನೂ ಬೀಜ ಸಂಗ್ರಹವಾಗದೇ ಇರುವದರಿಂದ ರೈತರು ಕಚೇರಿಗೆ ಅಲೆದಾಡುವಂತಹ ದುಸ್ಥಿತಿ ಬಂದೊದಗಿದೆ.
ಶಿರಹಟ್ಟಿ ತಾಲೂಕು ಒಟ್ಟು ವಿಸ್ತೀರ್ಣದ ಸರಿ ಸುಮಾರು 74958 ಹೆಕ್ಟೇರ್ ಕೃಷಿಗೆ ಯೋಗ್ಯವಾದ ಭೂಮಿಯಲ್ಲಿ ನೀರಾವರಿಯನ್ನು ಅವಲಂಬಿಸಿ 9080 ಹೆಕ್ಟೇರ್ ಬೂಮಿ ಇದ್ದರೆ ಒಣ ಬೇಸಾಯ ಮಳೆ ಆಧಾರಿತ ಸುಮಾರು 65878 ಹೆಕ್ಟೇರ್ ಭೂಮಿ ಇದೆ. ಇದರಲ್ಲಿ ಶೇ.60ರಷ್ಟು ಕೆಂಪು ಭೂಮಿ, ಶೇ.40ರಷ್ಟು ಕಪ್ಪು ಭೂಮಿ, ಶೇ.94 ರಷ್ಟು ಕ್ಷೇತ್ರ ಮಳೆಯಾಧಾರಿತ ಭೂಮಿಯೇ ಇರುತ್ತದೆ.

ಈ ಬಾರಿ ಎಪ್ರೀಲ್ ತಿಂಗಳಲ್ಲೇ ಮುಂಗಾರು ಪೂರ್ವ ಮಳೆಯು ಬಂದಿದ್ದರಿಂದ ಬಹುತೇಕ ರೈತರು ತಮ್ಮ ಜಮೀನುಗಳನ್ನು ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದಾರೆ. ಅವರಿಗೆ ಸಧ್ಯ ಅವಶ್ಯಕವಿರುವಂತಹ ಹೆಸರು, ತೊಗರಿ ಸೇರಿದಂತೆ ಇನ್ನುಳಿದ ಧಾನ್ಯಗಳನ್ನು ಬಿತ್ತನೆ ಮಾಡುವ ನಿರೀಕ್ಷೆ ಇದ್ದು, ಆದರೆ ರೈತರಿಗೆ ಸಮರ್ಪಕವಾಗಿ ಬೀಜ ವಿತರಣೆ ಮಾಡಬೇಕಾಗಿದ್ದಂತಹ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಇಲ್ಲಿಯವರೆಗೂ ಅವಶ್ಯಕ ಬೀಜ ಸಂಗ್ರಹವಾಗದೇ ಇರುವುದು ಅಧಿಕಾರಿಗಳ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗಬೇಕಿದ್ದ ಕೃಷಿ ಇಲಾಖೆಯಲ್ಲಿ ಬಿತ್ತನೆಯ ಬೀಜಗಳು, ಗೊಬ್ಬರ ಇಲ್ಲದಂತಾಗಿದ್ದರಿಂದ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಬೀಜ ಖರೀದಿಸಿ ಬಿತ್ತನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಈ ಭಾಗದ ಬಹುತೇಕ ರೈತರ ಅಳಲು. ಹಾಗೂ ರೈತರಿಗೆ ಸಲಹೆ-ಸೂಚನೆಗಳನ್ನು ನೀಡಬೇಕಾದಂತಹ ಅಧಿಕಾರಿಗಳು ಸಹ ಕಚೇರಿಯಲ್ಲಿ ಲಭ್ಯವಿಲ್ಲದಿರುವುದು ಕಂಡು ಬಂದಿತು. ಸಾವಯವ ಗೊಬ್ಬರ-420 ಬ್ಯಾಗ, ಜಿಪ್ಸಂ-400ಬ್ಯಾಗ ಹಾಗೂ ವರ್ಮಿ ಕಾಂಪೋಸ್ಟ್ 400ಬ್ಯಾಗ ಸಂಗ್ರಹವಿರುವುದಾಗಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಹೇಳಿದರು.


ಅಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಸಮರ್ಪಕ ಬೀಜ ವಿತರಣೆ ಮಾಡುವಂತೆ ಸೂಚಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು.

ರಾಮಣ್ಣ ಲಮಾಣಿ, ಶಾಸಕ

loading...