ಬಿಮ್ಸ್‍ಗೆ ಮಹರ್ಷಿ ವಾಲ್ಮೀಕಿ ಹೆಸರಿಡಿ

0
98

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಗ್ರಹ
ಕನ್ನಡಮ್ಮ ಸುದ್ದಿ
ಬೆಳಗಾವಿ 21: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಮಹರ್ಷಿ ವಾಲ್ಮೀಕಿ ಅವರ ಹೆಸರು ಇಡುವಂತೆ ಜಿಲ್ಲಾಡಳಿತದಿಂದ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕು ಎಂದು ಬುಧವಾರ ಜಿಲ್ಲಾಧಿಕಾರಿ ಎನ್. ಜಯರಾಮ್ ಅಧ್ಯಕ್ಷತೆಯಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರುಗಳು, ಪದಾಧಿಕಾರಿಗಳು ಆಗ್ರಹಿಸಿದರು.
ಭಾರತ ದೇಶದ ಎಲ್ಲ ಜಾತಿ, ಜನಾಂಗದವರಿಗೆ ರಾಮಾಯಣದಂತ ಪ್ರಸಿದ್ದ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕ ಅವರ ಹೆಸರಿನಲ್ಲಿ ಬೆಳಗಾವಿ ನಗರದಲ್ಲಿ ಯಾವುದೇ ಕಟ್ಟಡ,ಶಿಕ್ಷಣ ಸಂಸ್ಥೆಗಳಿಲ್ಲ. ಮಹಾನಗರದ ಹೃದಯ ಭಾಗದಲ್ಲಿರುವ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಮಹರ್ಷಿ ವಾಲ್ಮೀಕಿ ಹೆಸರಿಡುವುದು ಸೂಕ್ತವೆಂದು ಹೇಳಿದರು.
ಜಿಲ್ಲಾಧಿಕಾರಿ ಎನ್.ಜಯರಾಮ್ ಅವರು ಮಾತನಾಡಿ. ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುಧಾನ ಮಂಜೂರಾಗಿದೆ. ನಿವೇಶನದ ಸಮಸ್ಯೆಯಿಂದ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಶೀಘ್ರದಲ್ಲಿ ಮಹಾನಗರದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತದೆ. ಸಂಘ, ಸಂಸ್ಥೆಗಳು ವಾಲ್ಮೀಕಿ ಜಯಂತಿಯ ಶುಭಾಶಯಗಳ ನಾಮಫಲಕಗಳನ್ನು ಅಳವಡಿಸಿ. ಆದರೆ ವಾಲ್ಮೀಕಿ ಅವರ ಭಾವಚಿತ್ರ ಬಿಟ್ಟು ಸಂಘದ ಪದಾಧಿಕಾರಿಗಳ ಭಾವಚಿತ್ರಗಳನ್ನು ಹಾಕಬೇಡಿ ಎಂದು ಸಲಹೆ ನೀಡಿದರು.
ಶಬ್ದ ಮಾಡುವ ಡಾಲ್ಬಿಗಳ ಬದಲು ಗ್ರಾಮೀಣ ಭಾಗದಲ್ಲಿರುವ ವಾಧ್ಯಮೇಳಗಳನ್ನು ಮೆರವಣಿಗೆ ಕರೆತನ್ನಿ. ಇದ್ದರಿಂದ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಲ್ಲದೆ ವಾಲ್ಮೀಕಿ ಅವರ ರಾಮಾಯಣದಲ್ಲಿ ಬರೆದ ವಾಕ್ಯಗಳನ್ನು ಪ್ರಸ್ತುತ ಪಡಿಸಿ. ಉತ್ತಮ ಉಪನ್ಯಾಸಕರಿಂದ ವಾಲ್ಮೀಕಿ ಅವರ ವಿಚಾರಗಳನ್ನು ಸಾರ್ವಜನಿಕರಿಗೆ ಪ್ರಚಾರ ಪಡಿಸಲು. ವಾಲ್ಮೀಕಿ ಅವರ ವಾಕ್ಯಗಳನ್ನೊಳಗೊಂಡ ನಾಮಫಲಕಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಬೇಕು. ಸರಕಾರದ ಬೇರೆ ಬೇರೆ ಇಲಾಖೆಯ ಅಭಿವೃದ್ಧಿಯ ಯೋಜನೆಗಳ ರೂಪಕ ಸಿದ್ದಪಡಿಸಬೇಕು. ವಾಲ್ಮೀಕಿ ಜಯಂತಿಯ ಮೆರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ಜಾತಿ, ಜನಾಂಗದವರು ಭಾಗವಹಿಸುವಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಅಕ್ಟೋಬರ 16 ರಂದು ಅದ್ದೂರಿ, ಸಂಭ್ರಮ, ಭಕ್ತಿ, ಶೃದ್ಧೆಯಿಂದ ವಾಲ್ಮೀಕಿ ಜಯಂತಿಯನ್ನು ನಗರದ ಗಾಂಧಿ ಭವನದಲ್ಲಿ ಆಚರಿಸಲು ಹಾಗೂ ಕಾರ್ಯಕ್ರಮದ ಪ್ರಮುಖ ವೇದಿಕೆ ಹಕ್ಕ-ಬುಕ್ಕರ ಹೆಸರಿಡಲು ಸಭೆಯಲ್ಲಿ ತೀರ್ಮಾನಿಸಲಾಯಿತ್ತು. ಮೆರವಣಿಗೆ ಹೆಚ್ಚು ಆಧ್ಯತೆ ನೀಡದೆ. ಉತ್ತಮ ಉಪನ್ಯಾಸಕರಿಂದ ಉಪನ್ಯಾಸ ಕಾರ್ಯಕ್ರಮ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಧನ ಸಹಾಯ ನೀಡಿ ಗೌರವಿಸಬೇಕು. ವಾಲ್ಮೀಕಿ ಅವರ ವಿಚಾರ ದಾರೆಗಳು ಎಲ್ಲ ಸಮಾಜದ ಜನರಿಗೆ ಮುಟ್ಟಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘ, ಸಂಸ್ಥೆಗಳ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ಬುಡಾ ಆಯುಕ್ತ ಶಶಿಧರ ಕುರೇರ, ಡಿಡಿಪಿಐ ಎಸ್.ಐ.ಹಳಿಂಗಳೆ, ನೆಹರು ಯುವ ಕೇಂದ್ರದ ಎಸ್.ಯು.ಜಮಾದಾರ, ಯಲ್ಲಪ್ಪಾ ಕುಳೆಕರ, ಅರವಿಂದ ಕಾರ್ಚಿ, ಮಲ್ಲಿಕಾರ್ಜುನ ರಾಶಿಂಗೆ, ಬಾವುಕಣ್ಣ, ಮಹಾದೇವ ತಳವಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here