ಬೃಹತ್ ಮರಗಳು ಧರೆಗುರುಳುವ ಸ್ಥಿತಿ: ವಾಹನ ಸವಾರರ ಆತಂಕ

0
65

ಕನ್ನಡಮ್ಮ ಸುದ್ದಿ-ಕುಮಟಾ: ಕರಾವಳಿ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಗಾಳಿ ಸಮೇತ ಮಳೆಯಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿರುವ ಕೆಲವೊಂದು ಬೃಹತ್ ಮರಗಳು ಧರೆಗುರುಳುವ ಸ್ಥಿತಿಯಲ್ಲಿರುವುದು ವಾಹನ ಸಂಚಾರರಿಗೆ ಆತಂಕ ಉಂಟು ಮಾಡಿದೆ. ಅಲ್ಲದೇ ಬೃಹತ್ ಮರಗಳು ವಾಹನಗಳ ಮೇಲೆ ಉರುಳಿ ಬಿದ್ದರೆ ಭೀಕರ ಅಪಘಾತವಾಗುವ ಜೊತೆಗೆ ಪ್ರಾಣ ಹಾನಿ ಉಂಟಾಗುವ ಸಾಧ್ಯತೆ ಅಧಿಕವಾಗಿರುವುದರಿಂದ ಮುರಿದು ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಅರಣ್ಯ ಇಲಾಖೆ ಗುರುತಿಸಿ ತೆರವುಗೊಳಿಸುವ ಕಾರ್ಯವಾಗಬೇಕು ಎಂದು ನಾಗರಿಕರ ಮಾತಾಗಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಂದಿಕೊಂಡಿರುವ ಎಲ್‍ಐಸಿ ಕಚೇರಿ ಹಾಗೂ ಪಕ್ಕದ ಮಹಾಸತಿ ಕಾಂಪ್ಲೆಕ್ಸ್ ಎದುರಿನಲ್ಲಿ ಬೃಹತ್ ಮರಗಳು ಬೀಳುವ ಸ್ಥಿತಿಯಲ್ಲಿದೆ. ಕಳೆದ ಗುರುವಾರ ರಾತ್ರಿ ಗಾಳಿ ಸಮೇತ ಮಳೆಯಾಗುತ್ತಿರುವುದರಿಂದ ಎಪಿಎಂಸಿ, ಎಲ್‍ಐಸಿ ಕಚೇರಿ ಬಳಿ ಹಾಗೂ ಹರಕಡೆಯಲ್ಲಿ ಹೆದ್ದಾರಿ ಅಂಚಿನಲ್ಲಿರುವ ಮರಗಳು ಬುಡ ಸಮೇತ ಧರೆಗುರುಳಿದ್ದು, ರಾತ್ರಿಯಿಂದ ಬೆಳಗಿನ ಜಾವವರೆಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅಲ್ಲದೇ ಹೆಸ್ಕಾಂನ ಸುಮಾರು 20 ಕಂಬಗಳು ಹಾಗೂ ವಿದ್ಯುತ್ ಪರಿಕರಗಳಿಗೆ ಸೇರಿದಂತೆ ಸುಮಾರು 2 ಲಕ್ಷ ರೂ ರಷ್ಟು ನಷ್ಟ ಉಂಟಾಗಿತ್ತು. ಹಾಗಾಗಿ ಅಪಾಯದ ಅಂಚಿನಲ್ಲಿರುವ ಮರಗಳನ್ನು ತೆರವು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೆಸ್ಕಾಂ ಅಧಿಕಾರಿಗಳು ಸಹ ಅರಣ್ಯ ಇಲಾಖೆಗೆ ಮೌಖಿಕವಾಗಿ ತಿಳಿಸಿದ್ದಾರೆ.
ಅಲ್ಲದೆ ಹೆದ್ದಾರಿಯ ಕೆಲವೆಡೆ ಗಟಾರ್‍ಗಳ ಆಳವನ್ನು ಹೆಚ್ಚಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಮರಗಳ ಬುಡ ಭಾಗದಲ್ಲಿ ಸಡಿಲಿಕೆ ಉಂಟಾಗಿ ಬುಡಸಮೇತ ಕಿತ್ತು ಬೀಳುವ ಸಾಧ್ಯತೆ ಅಧಿಕವಾಗಿದೆ. ಅಲ್ಲದೆ ರಾತ್ರಿ ಸಮಯದಲ್ಲೇ ಗಾಳಿ-ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಮರಗಳು ಮುರಿದು ಬೀಳುವ ಸಾಧ್ಯತೆ ಅಧಿಕವಾಗಿರುತ್ತದೆ. ಗಾಳಿ-ಮಳೆಗೆ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಮರಗಳು ಉರುಳಿ ಬಿದ್ದರೆ ಹೆದ್ದಾರಿ ಸಂಚಾರಕ್ಕೆ ತೀವ್ರ ಅಡಚಣೆ ಮತ್ತು ತೊಂದರೆ ಉಂಟಾಗುತ್ತದೆ. ಬೃಹತ್ ಮರಗಳು ಎಲ್ಲಾದರೂ ವಾಹನಗಳ ಮೇಲೆ ಉರುಳಿ ಬಿದ್ದರೆ ಪ್ರಾಣ ಹಾನಿ ವುಂಟಾಗುವ ಸಾಧ್ಯತೆ ಅಧಿಕವಾಗಿದೆ. ಹಾಗಾಗಿ ಮುರಿದುಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಅರಣ್ಯ ಇಲಾಖೆ ಗುರುತಿಸಿ ಸಂಚಾರಕ್ಕೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗದ ರೀತಿಯಲ್ಲಿ ತೆರವುಗೊಳಿಸುವ ಕಾರ್ಯವಾಗಬೇಕು ಎಂದು ನಾಗರಿಕರಾದ ಹನುಮಂತ ಭಂಡಾರಿ, ರಾಜೇಶ ನಾಯ್ಕ, ಬಾಳಾ ಗಾಂವ್ಕರ್, ಆರ್ ಬಿ ಶಾನಭಾಗ, ಶ್ರೀಧರ ಗೌಡ, ಗನಿ ಸಾಬ್, ವಿನಾಯಕ ಕಾಮತ ಹಾಗೂ ಮೊದಲಾದವರು ಎಚ್ಚರಿಸಿದ್ದಾರೆ.
**
ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಕುಮಟಾ ಆರ್‍ಎಫ್‍ಒ ಕಿರಣಬಾಬು ಅವರು, ಅರಣ್ಯ ಇಲಾಖೆಯ ಕಾನೂನಿನಡಿಯಲ್ಲಿ ಮರಗಳನ್ನು ಕಡಿಯಲು ಅವಕಾಶವಿಲ್ಲವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮುರಿದು ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿ ತೆರವುಗೊಳಿಸಲು ಮೇಲಾಧಿಕಾರಿಗಳಿಂದ ಪರವಾನಗಿ ಪಡೆದು ಹಳೇ ಮರಗಳನ್ನು ತೆರವುಗೊಳಿಸಲಾಗುವುದು. ಅಲ್ಲದೇ ಮರಗಳ ತೆರವಾದ ಸ್ಥಳದಲ್ಲಿ ಗಿಡಗಳನ್ನು ನೆಡುವ ಕಾರ್ಯ ಮಾಡಲಾಗುವುದು ಎಂದರು.

loading...