ಬೆಟಗೇರಿ ದತ್ತು ಸಂಸ್ಥೆಯ ಮಗು ಆಂದ್ರಪ್ರದೇಶದ ದಂಪತಿಗಳ ಮಡಿಲಿಗೆ

0
3

ಕನ್ನಡಮ್ಮ ಸುದ್ದಿ-ಗದಗ: ಆಧುನಿಕ ಇಂದಿನ ದಿನಗಳಲ್ಲಿ ದಂಪತಿಗಳಿಗೆ ಮಕ್ಕಳಾಗುವುದು ವಿಳಂಭವಾಗುತ್ತಿರುವದು, ಬಂಜೆತನದಂತಹ ಪ್ರಕರಣಗಳು ಹೆಚ್ಚಾಗುತ್ತಿರುವದು ವೈದ್ಯಕೀಯ ಕ್ಷೇತ್ರಕ್ಕೆ, ಕುಟುಂಬ ವರ್ಗಕ್ಕೆ ಆತಂಕವನ್ನುಂಟು ಮಾಡುತ್ತಿದೆ ಎಂದು ಹಿರಿಯ ವೈದ್ಯೆ ಡಾ. ರಾಧಿಕಾ ಕುಲಕರ್ಣಿ ಅಭಿಪ್ರಾಯಪಟ್ಟರು.
ಬೆಟಗೇರಿಯ ಸೇವಾಭಾರತಿ ಟ್ರಸ್ಟ (ರಿ)ನ ಅಮೂಲ್ಯ (ಪಿ) ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ದತ್ತು ಪೂರ್ವ ಪೋಷಕತ್ವದ ಕಾರ್ಯಕ್ರಮದಲ್ಲಿ ಸಂಸ್ಥೆಯ 27ನೇ ಗಂಡು ಮಗುವನ್ನು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗಳಿಗೆ ಹಸ್ತಾಂತರಿಸಿ ಮಾತನಾಡಿದರು. ದಂಪತಿಗಳಿಗೆ ಮಕ್ಕಳಾಗುವದು ವಿಳಂಭವಾಗುತ್ತಿರುವದು, ಬಂಜೆತನದಂತಹ ಪ್ರಸಂಗಗಳನ್ನು ಎದುರಿಸುವದು ಬಹಳಷ್ಟು ಹಿಂಸೆ ಎನ್ನಿಸುವಂತಾಗಿದೆ. ಇಂತಹ ದಂಪತಿಗಳು ವೈದ್ಯರೆಡೆ ತಮ್ಮ ನೋವು ಕಷ್ಟಗಳನ್ನು ನಿವೇದಿಸಿಕೊಳ್ಳುತ್ತಿರುವದು ನೋವಿನ ಸಂಗತಿಯಾಗಿದೆ. ಸಂತಾನ ವಿಳಂಭವಾಗುತ್ತಿರುವುದಕ್ಕೆ ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಗುಣಾತ್ಮಕ ಸುಧಾರಣೆಗಳಾಗಿವೆ. ಅಗತ್ಯ ವೈದ್ಯಕೀಯ ಪರೀಕ್ಷೆ, ಔಷದೋಪಚಾರದಿಂದ ಬಂಜೆತನಕ್ಕೆ ಉತ್ತರ ಕಂಡುಕೊಳ್ಳಲಾಗುತ್ತಿದೆ ಎಂದರು.
ದುಶ್ಚಟಗಳಿಂದ ದೂರವಿದ್ದು ಸತ್ವಯುತ ಆಹಾರ ಸೇವನೆ, ಹಣ್ಣು ಹಸಿ ತರಕಾರಿಯುಳ್ಳ ಸಮತೋಲನ ಆಹಾರ ಸೇವನೆ, ವಾಯು ವಿಹಾರ, ಲಘು ಸಂಗೀತ ಆಲಿಕೆ, ಯೋಗ ಧ್ಯಾನದಂತಹ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದರ್ಶ ದಾಂಪತ್ಯ ಜೀವನ ನಡೆಸುವ ಮೂಲಕ ಮನೆಯಲ್ಲಿ ಮಕ್ಕಳ ಕಲರವನ್ನಾಗಿಸುವ ನಿಟ್ಟಿನಲ್ಲಿ ದಂಪತಿಗಳು ಮುಂದಾಗಲಿ ಎಂದು ಶುಭ ಹಾರೈಸಿದರಲ್ಲದೆ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲ್ಯಾಘಿಸಿದರು. ಇನ್ನೋರ್ವ ಮುಖ್ಯ ಅತಿಥಿ ಬಿ.ಎಫ್.ದಂಡಿನ ಅವರು ಮಾತನಾಡಿ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಸಂಸ್ಥೆಯು ಮಗುವನ್ನು ನೀಡುವ ಪುಣ್ಯದ ಕಾರ್ಯವನ್ನು ಮಾಡುತ್ತಿರುವದು ಅಭಿನಂದನೀಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿ, ಸಂಸ್ಥೆಯು ನಿರ್ಲಕ್ಷಿತ ಹಾಗೂ ದಂಪತಿಗಳಿಗೆ ಬೇಡವಾದ ಮಗುವನ್ನು ಸಂರಕ್ಷಿಸಿ ಕಾನೂನುಬದ್ಧವಾಗಿ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಹಸ್ತಾಂತರಿಸುವ ಕಾರ್ಯ ಮಾಡುತ್ತಿದೆ. ಬರಲಿರುವ ದಿನಗಳಲ್ಲಿ ನಿರ್ಲಕ್ಷಿತ ಮತ್ತು ಬೇಡವಾದ ಮಗುವಿನ ಸಂಖ್ಯೆ ಇಳಿಮುಖವಾಗಲಿ, ದಂಪತಿಗಳಿಗೆ ಉತ್ತಮ ಆದರ್ಶ ಮಕ್ಕಳು ಜನಿಸಿ ನಾಡು-ದೇಶಕ್ಕೆ ಹೆಸರು ತರುವಂತಾಗಲಿ ಎಂದರು. ಡಾ. ಉದಯ ಕುಲಕರ್ಣಿ, ಕೆ.ಆರ್.ನಾಯ್ಕರ್, ಸುಭಾಶ ಬಬಲಾದಿ ಇದ್ದರು. ಉಮಾ ಮಂಜುನಾಥ ಚನ್ನಪ್ಪನವರ ಪ್ರಾರ್ಥಿಸಿದರು, ಸಿ.ಎಸ್.ಬೊಮ್ಮನಳ್ಳಿ ಸ್ವಾಗತಿಸಿದರು, ಬಸವರಾಜ ನಾಗಲಾಪೂರ ಪರಿಚಯಿಸಿದರು, ಮಂಜುನಾಥ ಚನ್ನಪ್ಪನವರ ಮಾತನಾಡಿದರು.
ಚೇತನ ಮೇರವಾಡೆ ನಿರೂಪಿಸಿದರು, ರಾಜೇಶ ಖಟವಟೆ ವಂದಿಸಿದರು.

loading...