ಭಾರತದ ವಿರುದ್ಧ ಏಕದಿನ ಸರಣಿ ಜಯ ವಿಶೇಷವಾದದ್ದು: ಫಿಂಚ್‌

0
12

ನವದೆಹಲಿ:- ಭಾರತ ವಿರುದ್ಧ ಏಕದಿನ ಸರಣಿಯನ್ನು 3-2 ಅಂತರದಲ್ಲಿ ಜಯ ಸಾಧಿಸಿರುವುದು “ನಂಬಲಾಗದ್ದು ಹಾಗೂ ಪ್ರಶಂಸನಾರ್ಹವಾದದ್ದು” ಎಂದು ಆಸ್ಟ್ರೇಲಿಯಾ ನಾಯಕ ಆ್ಯರೋನ್‌ ಫಿಂಚ್‌ ತಿಳಿಸಿದ್ದಾರೆ.

ಏಕದಿನ ಸರಣಿಯ ಆರಂಭದ ಎರಡು ಪಂದ್ಯಗಳಲ್ಲಿ ಸೋತು ಆಸ್ಟ್ರೇಲಿಯಾ 0-2 ಹಿನ್ನಡೆ ಅನುಭವಿಸಿತ್ತು. ಆದರೂ ಇದಕ್ಕೆ ಎದೆಗುಂದದೆ “ಸ್ಥಿತಿ ಸ್ಥಾಪಕತ್ವ ಹಾಗೂ ಹೋರಾಟ”ದ ಮೂಲಕ ಅಂತಿಮವಾಗಿ 3-2 ಅಂತರದಲ್ಲಿ ಸರಣಿ ಜಯಿಸಿದ್ದೇವೆ ಎಂದು ತಂಡದ ಕುರಿತು ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ನಾಯಕ ಆ್ಯರೋನ್‌ ಫಿಂಚ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆದ ಐದನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಿ 35 ರನ್‌ಗಳಿಂದ ಜಯ ಸಾಧಿಸಿತು. ಇದರೊಂದಿಗೆ ಆಸ್ಟ್ರೇಲಿಯಾ 10 ವರ್ಷಗಳ ಬಳಿಕ ಭಾರತ ನೆಲದಲ್ಲಿ ಏಕದಿನ ಸರಣಿ ಗೆದ್ದು ಬೀಗಿತು.

“ಆರಂಭದ ಎರಡು ಪಂದ್ಯಗಳನ್ನು ಕೈ ಚೆಲ್ಲಿಕೊಂಡಿದ್ದರೂ ನಾವು ಕಠಿಣ ಹೋರಾಟ ಮುಂದುವರಿಸಿದೆವು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ತಂಡದ ಆಟಗಾರರು ಯಶ ಸಾಧಿಸಿದರು. ಹಾಗಾಗಿ, ಸತತ ಮೂರು ಪಂದ್ಯಗಳಲ್ಲಿ ಗೆದ್ದು ಸರಣಿ ಗೆಲ್ಲಲು ಸಾಧ್ಯವಾಯಿತು” ಎಂದು ಫಿಂಚ್‌ ತಿಳಿಸಿದ್ದಾರೆ

“ಈ ಹಿಂದೆ ಕೆಲವೇ ಕೆಲವು ಏಕದಿನ ಪಂದ್ಯಗಳಲ್ಲಿ ಮಾತ್ರ ನಾನು ಆಡಿದ್ದೆ. ಆದರೆ, ಇದೀಗ ಸೀಮಿತ ಓವರ್‌ ಪಂದ್ಯಗಳಲ್ಲಿ ಲಯಕ್ಕೆ ಮರಳುತ್ತಿದ್ದೇನೆ. ಆಸ್ಟ್ರೇಲಿಯಾದಲ್ಲಿನ ಬೇಸಿಗೆ ವಾತಾವರಣಕ್ಕೆ ತಕ್ಕಂತೆ, ಅದೇ ರೀತಿ ಭಾರತ ನೆಲದಲ್ಲೂ ಬೌಲಿಂಗ್‌ ಮಾಡಿ ಯಶಸ್ಸು ಕಂಡಿದ್ದೇನೆ. ಮುಂಬರುವ ವಿಶ್ವಕಪ್‌ನಲ್ಲೂ ಇದೇ ಲಯ ಮುಂದುವರಿಸುತ್ತೇನೆಂಬ ನಂಬಿಕೆ ಇದೆ” ಎಂದು ವೇಗಿ ಪ್ಯಾಟ್‌ ಕಮಿನ್ಸ್‌ ಹೇಳಿದ್ದಾರೆ.

loading...