ಭಾರತ್ ಬಂದ್‍ಗೆ ಎಂಎನ್ಎಸ್ ಬೆಂಬಲದ ಹೊರತಾಗಿಯೂ ಶಿವಸೇನೆ ತಟಸ್ಥ

0
13

ಮುಂಬೈ: ತೈಲೋತ್ಪನ್ನಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಚಾಲ್ತಿಯಲ್ಲಿರುವಂತೆಯೇ ಬಂದ್ ಗೆ ಸಂಬಂಧಿಸಿದಂತೆ ಶಿವಸೇನೆ ತಟಸ್ಥ ನಿಲುವು ತಳೆದಿದೆ.
ಈ ಹಿಂದೆ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಿದ್ದ ಶಿವಸೇನೆ ಇದೀಗ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ತಟಸ್ಥ ನಿಲುವು ತಳೆದಿರುವುದು ಅಚ್ಚರಿ ತಂದಿದೆ. ಶಿವಸೇನೆಯ ಆಪ್ತ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿಯೇ ಬಂದ್ ಗೆ ಬೆಂಬಲ ನೀಡಿದ್ದರೂ ಶಿವಸೇನೆ ಮಾತ್ರ ಬಂದ್ ನಿಂದ ದೂರ ಉಳಿದಿದೆ. ಈ ಹಿಂದೆ ಬಂದ್ ಗೆ ಕರೆ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿತ್ತು. ಇದಾಗ್ಯೂ ಶಿವಸೇನೆ ಮಾತ್ರ ಬಂದ್ ನಿಂದ ದೂರ ಉಳಿದು ತಟಸ್ಥತೆ ಪ್ರದರ್ಶನ ಮಾಡಿದೆ.
ಇನ್ನು ಶಿವಸೇನೆ ಮೂಲಗಳು ತಿಳಿಸಿರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳನ್ನೂ ಜಿಎಸ್ ಟಿ ವ್ಯಾಪ್ತಿಗೆ ತರುವ ಕುರಿತು ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ. ಇದರಿಂದ ತೈಲೋತ್ಪನ್ನಗಳ ದರ ಗಣನೀಯವಾಗಿ ಇಳಿಕೆಯಾಗಲಿದೆ. ಇದೇ ಕಾರಣಕ್ಕೆ ಶಿವಸೇನೆ ಇಂದಿನ ಬಂದ್ ನಲ್ಲಿ ತಟಸ್ಥ ನಿಲುವು ತಳೆದಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್ ಅವರು, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನೂ ಜಿಎಸ್ ಟಿ ವ್ಯಾಪ್ತಿಗೆ ಸೇರಿಸುವುದಕ್ಕೆ ಶಿವಸೇನೆಯ ಸಂಪೂರ್ಣ ಬೆಂಬಲವಿದೆ. ಆದರೆ ಅಲ್ಲಿಯವರೆಗೂ ದರ ಗಗನಕ್ಕೇರುತ್ತಿದ್ದು, ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ತಮ್ಮ ಪಾಲಿನ ವ್ಯಾಟ್ ಕಡಿತಗೊಳಿಸಿ ಸಾರ್ವಜನಿಕರ ಮೇಲಿನ ಹೊರೆಯನ್ನು ತಗ್ಗಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದ್ ಗೆ ಬೆಂಬಲ ನೀಡಿಲ್ಲ. ಹೀಗಾಗಿ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

loading...