ಭಾರತ ವಿಶ್ವಕಪ್‌ ಎತ್ತಿಹಿಡಿಯಬೇಕು : ಅಖ್ತರ್‌

0
23

ನವದೆಹಲಿ:- ಗುಂಪು ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಭಾರತ ತಂಡ ಪ್ರಸಕ್ತ ಸಾಲಿನ ಐಸಿಸಿ ವಿಶ್ವಕಪ್‌ ಪ್ರಶಸ್ತಿ ಮುಡಿಗೇರಿಸಿಕೊಳ್ಳಬೇಕು ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್‌ ಅಖ್ತರ್‌ ಆಶಿಸಿದ್ದಾರೆ.
ಒಟ್ಟು 9 ಪಂದ್ಯಗಳಿಂದ ಏಳರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 15 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದಿರುವ ಟೀಮ್‌ ಇಂಡಿಯಾ ಇಂಗ್ಲೆಂಡ್‌ ವಿರುದ್ಧ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿದೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ತಂಡದ ವಿರುದ್ಧವೇ ಭಾರತ ಅಂತಿಮ ನಾಲ್ಕರ ಘಟ್ಟದಲ್ಲಿ ಮಂಗಳವಾರ ಸೆಣಸಲು ಸಿದ್ಧವಾಗಿದೆ.
“ನ್ಯೂಜಿಲೆಂಡ್‌ಗೆ ಒತ್ತಡ ಆಡಲು ಬರುವುದಿಲ್ಲ. ಈ ಬಾರಿ ಅವರು ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಪ್ರಸಕ್ತ ಆವೃತ್ತಿಯಲ್ಲಿ ವಿಶ್ವಕಪ್‌ ಉಪಖಂಡಕ್ಕೆ ಒಲಿಯಲಿದೆ. ಭಾರತ ತಂಡದ ಪ್ರಶಸ್ತಿ ಗೆಲ್ಲುವ ಹಾದಿಗೆ ಸಹಕಾರ ನೀಡುತ್ತೇನೆ ಎಂದು ಅಖ್ತರ್‌ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ತಿಳಿಸಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಒಟ್ಟು ಐದು ಶತಕ ಸಿಡಿಸಿರುವ ರೋಹಿತ್‌ ಶರ್ಮಾ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರಾ ದಾಖಲೆಯನ್ನು ಮುರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಖ್ತರ್‌, “ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೇಳೆ ಶಾಟ್‌ ಹೊಡೆಯುವ ಸಮಯ ಅತ್ಯುತ್ತಮವಾಗಿದೆ. ಅವರು ಶತಕ ಗಳಿಸಿದ ಹಾದಿ ಅದ್ಭುತವಾಗಿದೆ. ಇವರಿಗೆ ಉತ್ತಮ ಸಾಥ್‌ ನೀಡಿದ ಕೆ.ಎಲ್‌ ರಾಹುಲ್‌ ಶತಕ ಗಳಿಸಿದ್ದು ಒಳ್ಳೆಯ ಸಂಗತಿ” ಎಂದು ಭಾರತದ ಆರಂಭಿಕರನ್ನು ಗುಣಗಾನ ಮಾಡಿದರು.
ಪಾಕಿಸ್ತಾನ ನಿಜಕ್ಕೂ ನ್ಯೂಜಿಲೆಂಡ್‌ಗಿಂತ ಅತ್ಯುತ್ತಮ ಪ್ರದರ್ಶನ ತೋರಿದೆ. ಆದರೆ, ರನ್‌ರೇಟ್‌ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಬೇಸರದಿಂದ ನುಡಿದರು.

loading...