ಮತ್ತೊಂದು ವಿಶಿಷ್ಠ ದಾಖಲೆ ನಿರ್ಮಿಸಿದ ರನ್‌ ಮಿಷನ್‌ ವಿರಾಟ್‌ ಕೊಹ್ಲಿ

0
41

ಬರ್ಮಿಂಗ್‌ಹ್ಯಾಮ್‌:-ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಭಾರತ ತಂಡ, ಇಂಗ್ಲೆಂಡ್‌ ವಿರುದ್ಧ 31 ರನ್‌ಗಳಿಂದ ಸೋಲು ಅನುಭವಿಸಿದರೂ ಟೀಮ್‌ ಇಂಡಿಯಾ ನಾಯಕ ಅರ್ಧ ಶತಕ ಸಿಡಿಸುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಭಾನುವಾರದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 76 ಎಸೆತಗಳಲ್ಲಿ 66 ರನ್‌ ಗಳಿಸಿದರು. ಆ ಮೂಲಕ ಐಸಿಸಿ ವಿಶ್ವಕಪ್‌ ಪ್ರಸಕ್ತ ಆವೃತ್ತಿಯಲ್ಲಿ ಸತತ ಐದು ಅರ್ಧ ಶತಕ ಪೂರೈಸಿದರು. ವಿಶ್ವಕಪ್‌ನಲ್ಲಿ ಸತತ ಐದು ಅರ್ಧ ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಸಾಧನೆಯನ್ನು ರನ್‌ ಮಿಷನ್‌ ಕೊಹ್ಲಿ ಮಾಡಿದರು. 2015ರ ವಿಶ್ವಕಪ್‌ ನಲ್ಲಿ ಆಸ್ಟ್ರೇಲಿಯಾ ತಂಡದ ಸ್ಟೀವ್‌ ಸ್ಮಿತ್‌ ಸತತ ಐದು ಅರ್ಧ ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಅಲ್ಲದೇ, ಇಂಗ್ಲೆಂಡ್‌ ವಿರುದ್ಧ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆಯನ್ನು ಕೊಹ್ಲಿ ಮಾಡಿದರು. ಆ ಮೂಲಕ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರನ್ನು ಹಿಂದಿಕ್ಕಿದರು. ದ್ರಾವಿಡ್‌ ಇಂಗ್ಲೆಂಡ್‌ ವಿರುದ್ಧ 1,238 ರನ್‌ ಗಳಿಸಿದ್ದಾರೆ.
ಬಾಂಗ್ಲಾದೇಶದ ಶಕೀಬ್‌ ಅಲ್ ಹಸನ್‌ ಹಾಗೂ ಆಸ್ಟ್ರೇಲಿಯಾ ನಾಯಕ ಆ್ಯರೋನ್‌ ಫಿಂಚ್‌ ಕೂಡ ಪ್ರಸಕ್ತ ಆವೃತ್ತಿಯಲ್ಲಿ ಸತತ ನಾಲ್ಕು ಅರ್ಧ ಶತಕ ಸಿಡಿಸಿದ್ದಾರೆ. ಆರು ಇನಿಂಗ್ಸ್‌ಗಳಲ್ಲಿ ಕೊಹ್ಲಿ 382 ರನ್‌ ಕಲೆ ಹಾಕಿದ್ದಾರೆ. ರೋಹಿತ್‌ ಶರ್ಮಾ 440 ರನ್‌ಗಳೊಂದಿಗೆ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ

loading...