ಮರಳು ಸಮಸ್ಯೆ ತಿಂಗಳೊಳಗಾಗಿ ಪರಿಹಾರ: ಸಚಿವ ರಾಜಶೇಖರ್‌

0
40

ಕನ್ನಡಮ್ಮ ಸುದ್ದಿ-ಕೊಪ್ಪಳ: ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಮರಳು ಸಮಸ್ಯೆ ಇರುವುದು ಗಮನಕ್ಕೆ ಬಂದಿದ್ದು, ಸಾರ್ವಜನಿಕರಿಗೂ ಯಾವುದೇ ಸಮಸ್ಯೆ ಇಲ್ಲದೆ ಸಿಗಬೇಕು ಅದಕ್ಕಾಗಿ ಒಂದು ತಿಂಗಳ ಒಳಗಾಗಿ ಇರುವ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜಾರಿ ಇಲಾಖೆ ಸಚಿವ ರಾಜಶೇಖರ್‌ ಪಾಟೀಲ್‌ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತಾವು ಪ್ರವಾಸ ಕೈಗೊಂಡಿದ್ದು, ಆಯಾ ಜಿಲ್ಲೆಯಲ್ಲಿ ಗಣಿಗಾರಿಕೆ, ಮತ್ತು ಮುಜಾರಾಯಿ ಇಲಖೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿರುವ ಸಮಸ್ಯೆಗಳು ಕುರಿತು ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದು, ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ಹಾಗೂ ಕ್ರಸರ್‌ ಗಣಿಗಾರಿಕೆ ನಡೆದಿರುವ ಬಗ್ಗೆ ಮಾಹಿತಿ ಇದ್ದು, ಹಾಗೂ ಪ್ರಮುಖವಾಗಿ ಮರಳಿನ ಸಮಸ್ಯೆ ಇರುವುದು ತಿಳಿದುಬಂದಿದೆ, ಈ ಎಲ್ಲ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಒಂದು ತಿಂಗಳ ಒಳಗಾಗಿ ಪರಿಹರಿಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಹಾಗೂ ಇತರೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೇರಡು ತಿಂಗಳಲ್ಲಿ ಮತ್ತೇ ಜಿಲ್ಲೆಗೆ ಭೇಟಿ ನೀಡುತ್ತೇನೆ, ಇಂದು ನನ್ನ ಗಮನಕ್ಕೆ ಬಂದಿರುವ ಎಲ್ಲಾ ವಿಷಯಗಳ ಬಗ್ಗೆ ಜಿಲ್ಲಾ ಹಾಗೂ ಸರ್ಕಾರದ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುವದೆಂದು ಹೇಳಿದ ಅವರು ಅಕ್ರಮ ಮರಳು ಸಾಗಾಣಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದು, ಈಗಿರುವ ಎಂಟು ಮರಳು ಬ್ಲಾಕ್‌ಗಳು ಇದ್ದು, ಇನ್ನೂ ಹೆಚ್ಚಿಗೆ ಬ್ಲಾಕ್‌ಗಳನ್ನು ಗುರುತಿಸಿ ಸುಲಭವಾಗಿ ಮರಳು ಸಿಗುವಂತಾಗಲು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ಭೂ ವಿಜ್ಞಾನಿ ಕೃಷ್ಣವೇಣಿ ಪ್ರಕರಣ ಮಾಹಿತಿ ಇಲ್ಲ : ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಯಾಗಿರುವ ಕೃಷ್ಣವೇಣಿ ಅವರ ಮೇಲೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಹಲ್ಲೆ ನಡೆದಿದೆ ಯಾಕೇ ಕ್ರಮಕೈಗೊಂಡಿಲ್ಲವೆಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಅವರ ಮೇಲೆ ಹಲ್ಲೆ ನಡೆದಿದ್ದರೆ ಆ ಬಗ್ಗೆ ದೂರು ಸಲ್ಲಿಸಬಹುದಿತ್ತು ಅಥವಾ ಮೇಲಾಧಿಕಾರಿಗಳ ಗಮನಕ್ಕೆ ತರಬಹುದಿತ್ತು, ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸಚಿವ ರಾಜಶೇಖರ್‌ ಪಾಟೀಲ್‌ ಸ್ಪಷ್ಟಪಡಿಸಿದರು.
ಅಂಜನಾದ್ರಿ ದೇವಸ್ಥಾನ ಮುಜಾರಾಯಿ ಇಲಾಖೆ ಸುಪರ್ದಿಗೆ ಇಲ್ಲ ಸಚಿವರ ಸ್ಪಷ್ಟನೆ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ಐತಿಹಾಸಿಕ ಹಿನ್ನಲೆಯುಳ್ಳ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನವನ್ನು ಮುಜಾರಾಯಿ ಇಲಾಖೆಯ ಸುಪರ್ದಿಗೆ ತೆಗದುಕೊಂಡಿಲ್ಲ, ಇದು ತಮ್ಮ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವದಿಲ್ಲ ಎಂದರು.

loading...