ಮರಳು ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

0
19

ಕನ್ನಡಮ್ಮ ಸುದ್ದಿ-ದಾಂಡೇಲಿ: ದಾಂಡೇಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಮತ್ತು ಗುತ್ತಿಗೆದಾರರ ಒಕ್ಕೂಟ (ರಿ) ವತಿಯಿಂದ ಸಂಘದ ಅಧ್ಯಕ್ಷ ರಾಜೇಸಾಬ ಕೇಸನೂರ ಇವರ ನೇತೃತ್ವದಲ್ಲಿ ಆ:02 ರಂದು ದಾಂಡೇಲಿ ನಗರದಲ್ಲಿ ಮರಳು ಕೊರತೆಯ ಸಮಸ್ಯೆಯನ್ನು ಬಗೆಹರಿಸುವಂತೆ ನಗರ ಸಭೆಯ ಅಧ್ಯಕ್ಷ ಎನ್‌.ಜಿ.ಸಾಳುಂಕೆ ಹಾಗೂ ವಿಶೇಷ ತಹಶೀಲ್ದಾರ್‌ ಕಾರ್ಯಾಲಯದ ಗೌಡಪ್ಪ ಬನಕದಿನ್ನಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯಲ್ಲಿ ದಾಂಡೇಲಿ ನಗರದಲ್ಲಿ ಮರಳಿನÀ ಕೊರತೆ ಉಂಟಾಗಿದ್ದು, ಹಲವಾರು ಕಾಮಗಾರಿಗಳು ಅರ್ಧದಲ್ಲೇ ನಿಂತಿದ್ದು ಇದರಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರು ಕೆಲಸವಿಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ ಹಾಗೂ ಅವರ ಹೊಟ್ಟೆ ಪಾಡಿನ ಜೀವನಕ್ಕೆ ತೊಂದರೆಯಾಗುತ್ತಿದೆ. ಅಲ್ಪ ಸ್ವಲ್ಪ ಸಿಗುವ ಮರಳು ದುಬಾರಿಯಾಗಿದ್ದರಿಂದ ಮನೆ ನಿವೇಶನಗಳನ್ನು ನಿರ್ಮಿಸಿಕೊಳ್ಳುವವರು ತೊಂದರೆಯಲ್ಲಿದ್ದಾರೆ. ಸರ್ಕಾರದ ಯೋಜನೆಗಳ ಸಹಾಯದಿಂದ ನಗರದ ಬಹಳಷ್ಟು ಬಡ ಜನರು ತಮ್ಮ ನಿವೇಶನಗಳನ್ನು ಕಟ್ಟಿಕೊಳ್ಳುತ್ತಿದ್ದು, ಉಸುಕಿನ ಕೊರತೆ ಹಾಗೂ ದುಬಾರಿ ವೆಚ್ಚದಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.
ಸ್ಥಳೀಯವಾಗಿ ಸಿಗುವ ಮರಳು ಕೂಡ ನಗರಕ್ಕೆ ದೊರೆಯುತ್ತಿಲ್ಲ. ರಾಮನಗರ, ಚಾಂದೇವಾಡಿ ಯಿಂದ ಸಿಗುವ ಮರಳು ಕೂಡಾ ನಗರಕ್ಕೆ ಬರುತ್ತಿಲ್ಲ. ಧಾರವಾಡ-ಹುಬ್ಬಳ್ಳಿ ಮಹಾ ನಗರಗಳಿಗೆ ಸರಬರಾಜು ಆಗುತ್ತಿದೆ. ಈ ಸಮಸ್ಯೆಯ ಕುರಿತು ಈ ಮೊದಲು ತಮಗೆ ತಿಳಿಸಲಾಗಿದ್ದು ತಮ್ಮ ಆದೇಶದಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆ ಪರಿಹಾರವಾಗಿತ್ತು. ಆದರೆ ಕಳೆದ ಕೆಲವು ತಿಂಗಳಿಂದ ಮತ್ತೆ ತೀವ್ರವಾಗಿ ಉಸುಕಿನ ಕೊರತೆಯ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿಯಲ್ಲಿ ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಬಾಬುಲಾಲ ಫೀರಜಾದೆ, ದೀಪಕ ಸಾವಂತ, ಅಬ್ದುಲ ಮಜೀದ ಕಿತ್ತೂರ, ಲಕ್ಷ್ಮಣ, ನೂರ ಜಮಾದಾರ, ಜಮೀರ ಮುಲ್ಲಾ, ಮಹ್ಮಮದ ಅಲಿ, ಮಾರುತಿ, ಡೇವಿಡ್‌ ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದರು.

loading...