ಮಾಜಿ ಸಿಎಂ ಸಿದ್ದುಗೆ ಸಂಸ್ಕಾರವಿಲ್ಲ: ಶೆಟ್ಟರ

0
53

ಕನ್ನಡಮ್ಮ ಸುದ್ದಿ-ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಸ್ಕಾರವಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಡೀ ದೇಶವೇ ಗೌರವದಿಂದ ಕಾಣುವಾಗಿ ಸಿದ್ದರಾಮಯ್ಯ ಮೋದಿ ಒಬ್ಬ ಚೋರ ಎನ್ನುವ ನೀವು. ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿಮ್ಮ ಕೈಯಲ್ಲಿ ಅಧಿಕ ವೆಚ್ಚದ ವಾಚ್ ಎಲ್ಲಿಂದ ಬಂತು. ಅದನ್ನು ನಿಮ್ಮ ಸ್ನೇಹಿತ ಕೊಟ್ಟಿದ್ದರೆ ಅದನ್ನು ಸರಕಾರಕ್ಕೆ ಏಕೆ ಹಸ್ತಾಂತರಿಸಿದಿರಿ. ನಿಮ್ಮಂಥ ಭ್ರಷ್ಟಾಚಾರ ನಡೆಸಿದವರು ಮೋದಿಯ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.
ಕಾಂಗ್ರೆಸ್ ನವರಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ವೀರಶೈವ ಲಿಂಗಾಯತ ಧರ್ಮ, ಕಳಸಾ ಬಂಡೂರಿ ವಿಷಯವನ್ನು ಮುಂದಿಡುತ್ತಾರೆ. ಸಿದ್ದರಾಮಯ್ಯ ನವರು ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.
ಎಲ್ಲ ಕಡೆ ಬಿಜೆಪಿ ಪರ ಒಲವು ಇದೆ. ಜನರು ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕೆಂಬ ವಲವು ಹೆಚ್ಚಿದೆ. ಯುವ ಸಮುದಾಯದಲ್ಲಿ ಹೆಚ್ಚಿನ ಆಸಕ್ತಿ ಬಿಜೆಪಿ ಪರ ಇದೆ. ಕರ್ನಾಟಕದಲ್ಲಿ ಮೊದಲನೇ ಹಂತದ ೧೪ ಕ್ಷೇತ್ರದ ಚುನಾವಣೆಯಲ್ಲಿ ೯ ಸ್ಥಾನವನ್ನು ಗೆಲವು ಸಾಧಿಸುವ ವಿಶ್ವಾಸವಿದೆ. ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಕರ್ನಾಟಕದಲ್ಲಿ ೧೨ ಕ್ಷೇತ್ರದಲ್ಲಿ ಗೆಲವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮೊದಲ ಬಾರಿಗೆ ಟೆಂಪಲ್ ರನ್ ಮಾಡುತ್ತಿದ್ದಾರೆ. ಉಮೇಶ ಜಾಧವ ಅವರನ್ನು ಕಂಡು ಸೋಲಿನ ಭಯ ಖರ್ಗೆ ಅವರಲ್ಲಿ ಕಾಡುತ್ತಿದೆ ಎಂದರು.
ಚಿಕ್ಕೋಡಿಯಲ್ಲಿ ಕಳೆದ ಲೋಕಸಭಾ ಚನಾವಣೆಯನ್ನು ಕಡಿಮೆ ಅಂತರಲ್ಲಿ ಬಿಜೆಪಿ ಸೋಲು ಅನುಭವಿಸಬೇಕಾಯಿತು. ಆದರೆ ಈ ಸಲ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆ ಗೆಲವು ಸಾಧಿಸುವುದು ನಿಶ್ಚಿತ. ಬೆಳಗಾವಿಯಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿ ನಾಲ್ಕನೇ ಬಾರಿ ಲೋಕಸಭೆಗೆ ಪ್ರವೇಶಿಸಿರುವ ಸುರೇಶ ಅಂಗಡಿ ಅವರು ಲಕ್ಷ ಮತಗಳ ಅಂತರದಲ್ಲಿ ಗೆಲವು ಸಾಧಿಸಲಿದ್ದಾರೆ ಎಂದು ಹೇಳಿದರು.
ಮಹಾಘಟಬಂಧನ ಎಲ್ಲಿದೆಯೋ ತಿಳಿಯುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿಯ, ಎಸ್ಪಿ, ಬಿಎಸ್ ಬಿ ಘಟಬಂಧನ ಮಾಡಿಕೊಡು ಚುನಾವಣೆ ಎದುರಿಸುತ್ತಿದ್ದಾರೆ. ಆದರೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಿ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಹಾಮೈತ್ರಿ ಮಾಡಿಕೊಂಡು ಚುನಾವಣೆ ನಡೆಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ೨೪ ಗಂಟೆಯಲ್ಲಿ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಕೆಲವೇ ಕೆಲವು ರೈತರಿಗೆ ಅನುಕೂಲವಾಗಿರುವುದನ್ನು ಬಿಟ್ಟರೆ ಯಾರಿಗೂ ಸಹಾಯವಾಗಿಲ್ಲ. ಇದು ರಾಜ್ಯದ ಜನರ ದುರ್ದೈವ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಹಾಲಿ ಸಂಸದ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ, ಬಿಜೆಪಿ ಮುಖಂಡರಾದ ಎಂ.ಬಿ.ಜಿರಲಿ, ರಾಜೇಂದ್ರ ಹರಕುಣಿ, ರಾಜುಚಿಕ್ಕನಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...