ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಸಚಿವ ದೇಶಪಾಂಡೆಯವರ ಕಾರ್ಯಕ್ಕೆ ಶ್ಲಾಘನೆ

0
23

ಕನ್ನಡಮ್ಮ ಸುದ್ದಿ-ದಾಂಡೇಲಿ: ನೂತನ ದಾಂಡೇಲಿ ತಾಲೂಕಿಗೆ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋಧನೆ ನೀಡಿ ರೂ:10 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಎನ್‌.ಪುಷ್ಪಾ ಅವರು ಆದೇಶ ಹೊರಡಿಸಿದ್ದಾರೆ. ನೂತನ ತಾಲೂಕಿಗೆ ಅಗತ್ಯವಾಗಿ ಬೇಕಾದ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕಾಗಿ ಸ್ಥಳೀಯ ಅಂಬೇವಾಡಿ ಗ್ರಾಮದ ಬ್ಲಾಕ್‌ ನಂ:21 ಬಿ ಪೈಕಿ 2 ಎಕರೆ ಜಮೀನನ್ನು ಕಾಯ್ದಿರಿಸಿ ಪಹಣೆಯಲ್ಲಿ ದಾಖಲಿಸಲಾಗಿದೆ. ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಯನ್ನು 3 ಹಂತಗಳಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದು, 2 ನೇ ಹಂತದಲ್ಲಿ ವಿವಿಧ ಇಲಾಖೆಗಳ ಕಟ್ಟಡ ನಿರ್ಮಾಣವನ್ನೂ ಹಾಗೂ ಅಧಿಕಾರಿ/ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಾಣ ಮಾಡುವುದನ್ನು 3 ನೇ ಹಂತದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಪ್ರಸ್ತುತ ದಾಂಡೇಲಿ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಿಸುವ ಸಂಬಂಧ ಲೋಕೋಪಯೋಗಿ ಇಲಾಖೆಯ ವತಿಯಿಂದ ತಯಾರಿಸಲ್ಪಟ್ಟ ರೂ:10 ಕೋಟಿಗಳ ಅಂದಾಜುಪಟ್ಟಿ ಮತ್ತು ನಕ್ಷೆಯನ್ನು ಸರ್ಕಾರಕ್ಕೆ ಸಲ್ಲಿಸಿ, ಆಡಳಿತಾತ್ಮಕ ಅನುಮೋಧನೆ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದರು. ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನು ಪರಿಗಣಿಸಿದ ಸರಕಾರ ಸರ್ಕಾರದ ಆದೇಶ ಸಂಖ್ಯೆ: ಕಂಇ 44 ಡಬ್ಲ್ಯೂಬಿಆರ್‌2018/ದಿನಾಂಕ 11.07.2018 ರ ಮೂಲಕ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋಧನೆ ನೀಡಿದೆ. ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳ ಅನುದಾನ ಬಿಡುಗಡೆ ಮತ್ತು ಅನುಮೋಧನೆ ಪತ್ರದಲ್ಲಿ ಪ್ರಸ್ತಾವಿತ ರೂ:10 ಕೋಟಿಗಳ ಅಂದಾಜಿನಲ್ಲಿಯೇ ಕಟ್ಟಡಕ್ಕೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಿಕೊಳ್ಳುವುದು. ಇತರೆ ಇಲಾಖೆಗಳ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 2 ನೇ ಹಂತದಲ್ಲಿ ಕೈಗೊಂಡಲ್ಲಿ, ಆಯಾಯ ಇಲಾಖೆಗಳ ಅನುದಾನದಿಂದಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದು. ಈ ಕಾಮಗಾರಿಗೆ ತಗಲುವ ವೆಚ್ಚವನ್ನು 2018-19 ನೇ ಸಾಲಿನ 4059-80-151-0-30-386 ಲೆಕ್ಕಶಿರ್ಷಿಕೆಯಲ್ಲಿ ಭರಿಸತಕ್ಕದ್ದು. ಹಾಗೂ ಈ ಕಾಮಗಾರಿಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ನಿಯಮಗಳು 2000 ರ ಪ್ರಕಾರ ಮಾಡತಕ್ಕದ್ದು ಎಂದು ಆದೇಶಿಸಲಾಗಿದೆ. ಸಚಿವ ದೇಶಪಾಂಡೆಯವರ ಕಾರ್ಯಕ್ಕೆ ಶ್ಲಾಘನೆ: ದಾಂಡೇಲಿಯನ್ನು ತಾಲೂಕನ್ನಾಗಿ ಘೋಷನೆ ಮಾಡುವಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸಿದ್ದ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆಯವರು ಇದೀಗ ತ್ವರಿತಗತಿಯಲ್ಲಿ ದಾಂಡೇಲಿ ತಾಲೂಕಿಗಾಗಿ ರೂ:10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಅನುದಾನ ಮಂಜೂರು ಮಾಡಿಸಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಅಗತ್ಯ ಮೂಲಸೌಕರ್ಯವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ-ದೇಶಪಾಂಡೆ: ದಾಂಡೇಲಿಯನ್ನು ಮಾದರಿ ತಾಲೂಕನ್ನಾಗಿಸುವ ಮಹತ್ವದ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ವಿಶೇಷ ಆಧ್ಯತೆಯಲ್ಲಿ ದಾಂಡೇಲಿ ತಾಲೂಕಿಗೆ ಬೇಕಾದ ಅಗತ್ಯ ಕೆಲಸ ಕಾರ್ಯಗಳನ್ನು ಅನುಷ್ಟಾನ ಪಡಿಸಲಾಗುತ್ತಿದೆ. ತಾಲೂಕಿಗೆ ಬೇಕಾದ ಅವಶ್ಯ ಎಲ್ಲ ಮೂಲಸೌಕರ್ಯಗಳನ್ನು ನೂತನ ದಾಂಡೇಲಿ ತಾಲೂಕಿಗೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವ ದೇಶಪಾಂಡೆಯವರು ಪತ್ರಿಕೆಗೆ ತಿಳಿಸಿದ್ದಾರೆ.

loading...