ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿದ ಅಧ್ಯಕ್ಷ ಪ್ರದೀಪ ಶೆಟ್ಟಿ

0
24

ಶಿರಸಿ: ಸಾರ್ವಜನಿಕರಲ್ಲಿ ಹಲವು ಗೊಂದಲ ಹಾಗೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದ ನಳಗಳಿಗೆ ಮೀಟರ್‌ ಅಳವಡಿಕೆ ವಿಚಾರಕ್ಕೆ ತಾತ್ಕಾಲಿಕ ತೆರೆ ಬಿದ್ದಿದ್ದು, ಬಿಜೆಪಿ ಸದಸ್ಯರ ವಿರೋಧದ ನಡುವೆಯೂ ಅಧ್ಯಕ್ಷ ಪ್ರದೀಪ ಶೆಟ್ಟಿ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿ ಮೂರು ತಿಂಗಳ ಕಾಲಾವಕಾಶ ನೀಡಿ ಆದೇಶಿಸಿದ್ದಾರೆ.
ಇಲ್ಲಿಯ ಅಟಲಜೀ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾದ ನಳಕ್ಕೆ ಮೀಟರ್‌ ಜೋಡಣೆ ವಿಷಯ ಆಡಳಿತ ಹಾಗೂ ವಿರೋಧಿ ಪಕ್ಷದ ಸದಸ್ಯರ ನಡುವೆ ಗದ್ದಲಕ್ಕೆ ಕಾರಣವಾಯಿತು. ಮಾಜಿ ಅಧ್ಯಕ್ಷ ರವಿ ಚಂದಾವರ ವಿಷಯ ಪ್ರಸ್ತಾಪಿಸಿ, ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ 6 ಸಾವಿರ, ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ 5 ಸಾವಿರ ನಳಗಳಿದೆ. ಆದರೆ ಅಲ್ಲಿ ಮೀಟರ್‌ ಅಳವಡಿಸಿಲ್ಲ. ಆದರೆ ಶಿರಸಿಯಲ್ಲಿ ಏಕಾಏಕಿ ನಳಕ್ಕೆ ಮೀಟರ್‌ ಅಳವಡಿಸುವ ಕ್ರಮ ಕೈಗೊಂಡಿದ್ದು ಸರಿಯಲ್ಲ. ವಾರಕ್ಕೊಮ್ಮೆ ನಗರಸಭೆ ನೀರು ನೀಡಲಾಗುತ್ತಿದೆ. ಇಂತಹ ಸಮಸ್ಯೆ ಇಟ್ಟುಕೊಂಡು ಮೀಟರ್‌ ಅಳವಡಿಕೆಗೆ ಹೇಗೆ ಕ್ರಮ ಕೈಗೊಳ್ಳುತ್ತೀರಿ? ಕೂಡಲೇ ಮೀಟರ್‌ ಅಳವಡಿಕೆ ಕ್ರಮ ಕೈಬಿಡಬೇಕು ಎಂದು ಆಗ್ರಹಿಸಿದರು. ಮಾಜಿ ಉಪಾಧ್ಯಕ್ಷ ಫ್ರಾನ್ಸಿಸ್‌ ನೊರೋನ್ಹಾ ಆಕ್ಷೇಪ ವ್ಯಕ್ತಪಡಿಸಿ ಸಾಕಷ್ಟು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ ತರಾತುರಿ ಕ್ರಮ ಇದಲ್ಲ. ಸಭೆಯಲ್ಲಿ ಪಾಲ್ಗೊಂಡ ಸದಸ್ಯರೇ ಈಗ ಯಾಕೆ ವಿರೋಧ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಈ ಹಿಂದೆ ನಗರಸಭೆಯ ಎಸ್‌.ಎಫ್‌.ಸಿ. ಅನುದಾನದಡಿ 24 ಲಕ್ಷ ರೂ ವೆಚ್ಚದಲ್ಲಿ 3 ವಾರ್ಡಗಳಲ್ಲಿ ಮೀಟರ್‌ ಅಳವಡಿಸಿದೆ. ಇದೀಗ ಜನರು ಹಣ ನೀಡಬೇಕು ಎಂದರೆ ವಿರೋಧಕ್ಕೆ ಕಾರಣವಾಗಬಹುದು.
ಹಾಗಾಗಿ ನಗರಸಭೆಯ ಯಾವುದಾದರೊಂದು ನಿಧಿಯಡಿ ಮೀಟರ್‌ ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ಸದಸ್ಯ ಶ್ರೀಧರ ಮೊಗೇರ ಹೇಳಿದರು. ಸದಸ್ಯ ಯಶವಂತ ಮರಾಠೆ ಮಾತನಾಡಿ, ನಗರಸಭೆಯಿಂದ ಮೀಟರ್‌ ಅಳವಡಿಸಿ ಇಲ್ಲವೇ ಸಾರ್ವಜನಿಕರಿಗೇ ಮೀಟರ್‌ ಅಳವಡಿಕೆಯ ಜವಾಬ್ದಾರಿ ನೀಡಬೇಕು ಎಂದರು.
ಸದಸ್ಯ ಅರುಣ ಕೋಡ್ಕಣಿ ಮಾತನಾಡಿ, ನಗರಸಭೆ ಸದಸ್ಯರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಮೀಟರ್‌ ಅಳವಡಿಕೆ ವಿಚಾರವು ನಗರಸಭೆಯ ಮರ್ಯಾದೆ ಹರಾಜು ಹಾಕುತ್ತಿದೆ. ಹಾಗಾಗಿ ತಕ್ಷಣ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಮಾಜಿ ಅಧ್ಯಕ್ಷ ಶ್ರೀಕಾಂತ ತಾರಿಬಾಗಿಲು ಮಾತನಾಡಿ, ಮೀಟರ್‌ ಅಳವಡಿಸುವುದು ಕಡ್ಡಾಯವಾಗಿದೆ. ಐಎಸ್‌ಐ ಮಾರ್ಕಿನ ಯಾವುದೇ ಕಂಪನಿಯ ಮೀಟರ್‌ ಅಳವಡಿಸಲು ಅವಕಾಶ ನೀಡಬೇಕು. ಕಾಲಮಿತಿ ವಿಸ್ತರಿಸಬೇಕು ಎಂದರು.
ಸಮಾಧಾನ ಪಡಿಸಿದ ಅಧ್ಯಕ್ಷ: ಮೀಟರ್‌ ಅಳವಡಿಕೆ ವಿಚಾರ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿ ಎಲ್ಲರೂ ಎದ್ದು ನಿಂತು ಮಾತನಾಡತೊಡಗಿದ್ದರಿಂದ ಸ್ವತಃ ಅಧ್ಯಕ್ಷರೇ ತಮ್ಮ ಖುರ್ಚಿಯಿಂದ ಎದ್ದು ಬಂದು ಎಲ್ಲರ ಸಮಾಧಾನ ಪಡಿಸಿದರು. ಈ ವೇಳೆ ಮಾತನಾಡಿದ ಅವರು, ಮೀಟರ್‌ ಅಳವಡಿಕೆಯಿಂದ ನೀರಿನ ಸದ್ಬಳಕೆ ಆಗುತ್ತದೆ. ಈ ಕಾರಣ ಮೀಟರ್‌ ಅಳವಡಿಸುವುದು ಕಡ್ಡಾಯವಾಗಿದೆ. ನಗರಸಭೆ ಮೇಲೆ ಅನಗತ್ಯ ಆರೋಪ ಮಾಡುವವರು ನಗರಸಭೆ ನಿಯಮಾವಳಿಗೊಳಪಟ್ಟು 645 ರೂ.ಗಳ 1 ಸಾವಿರ ಮೀಟರ್‌ ಜು.25ರೊಳಗೆ ನಗರಸಭೆ ಪ್ಲಂಬರಗಳಿಗೆ ತಂದು ಕೊಡಬೇಕು.
ಹಾಗೊಮ್ಮೆ ತಂದರೆ ನಗರಸಭೆಯೇ ಮುಂದಾಗಿ ಜೋಡಣೆ ಮಾಡಿಸುವ ಕಾರ್ಯ ಮಾಡಲಿದೆ. ಅಲ್ಲದೇ, ತಕ್ಷಣ ಮೀಟರ್‌ಗಳ ಹಣ ಭರಣ ಮಾಡಲಾಗುವುದು ಎಂದ ಅವರು, ಮೀಟರ್‌ ಅಳವಡಿಕೆ ತರಾತುರಿಯಲ್ಲಾದ ನಿರ್ಧಾರವಲ್ಲ. ನಿರಂತರ ಮೂರು ತಿಂಗಳಿಂದ ಈ ಕುರಿತು ಚರ್ಚಿಸಲಾಗಿದೆ. ಅಂದು ಒಪ್ಪಿಗೆ ಸೂಚಿಸಿ ಈಗ ವಿರೋಧ ಮಾಡುವುದು ಸರಿಯಲ್ಲ ಎಂದರು. ಸರ್ಕಾರದಿಂದ ಮಾನ್ಯತೆ ಪಡೆದ ಐಎಸ್‌ಐ ಮಾರ್ಕ್‌ ಹೊಂದಿರುವ ಯಾವುದೇ ಕಂಪನಿಯ ಮೀಟರ್‌ಗಳನ್ನು ಸಾರ್ವಜನಿಕರು ತಮ್ಮ ನಳಕ್ಕೆ ಅಳವಡಿಸಿಕೊಳ್ಳಬಹುದು ಎಂದು ಪ್ರದೀಪ ಶೆಟ್ಟಿ ಆದೇಶ ನೀಡಿದರು.

loading...