ಮೀಟರ್ ಬಡ್ಡಿ ದಂಧೆಗೆ ಬ್ರೇಕ್

0
11

ಬೆಂಗಳೂರು: ಮೈತ್ರಿ ಸರ್ಕಾರದಿಂದ ಬಡವರ ಬಂಧು ಯೋಜನೆ ಜಾರಿಗೆ ಸಿದ್ಧತೆ ನಡೆಸಿದ್ದೇವೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.
ಸರ್ಕಾರದ ಪ್ರಾಯೋಗಿಕ ಯೋಜನೆ ಹಿನ್ನಲೆಯಲ್ಲಿ ನಗರದ ಯಶವಂತಪುರ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗೆ ಇಂದು ಬೆಳಗ್ಗೆ ಭೇಟಿ ನೀಡಿ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಹೊಸ ಪ್ರಾಯೋಗಿಕ ಯೋಜನೆ ತರಲಾಗುತ್ತಿದ್ದು,ಈಗಾಗಲೇ ಈ ಯೋಜನೆಗೆ ರೂಪುರೇಷೆಗಳನ್ನು ತಯಾರಿಸಲಾಗುತ್ತಿದೆ. ಆದ್ದರಿಂದ ಬೀದಿ ಬದಿಯ ವ್ಯಾಪಾರ ಸಮಸ್ಯೆಗಳನ್ನು ತಿಳಿಯಲು ಈ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಬಡವರಿಗೆ ಈ ಯೋಜನೆ ತುಂಬಾ ಅನುಕೂಲವಾಗುವಂತೆ ತಯಾರಿಸುತ್ತಿದ್ದೇವೆ.ಈ ಯೋಜನೆಯಲ್ಲಿ ಬೀದಿ ಬದಿಯ ವ್ಯಾಪಾರಿ ಗಳ ಒಂದು ದಿನಕ್ಕೆ ವ್ಯಾಪಾರಕ್ಕೆ ಬೇಕಾಗುವ ಹಣವನ್ನು ಬೆಳಿಗ್ಗೆ ನೀಡಿ ಮತ್ತೆ ರಾತ್ರಿ ಹಣ ವಾಪಾಸು ಪಡೆಲಾಗುತ್ತದೆ.ಇದರಿಂದ ಖಾಸಗಿಯವರ ನೀಡುವ ಅತಿ ಹೆಚ್ಚು ಬಡ್ಡಿ ಸಾಲಕ್ಕೆ ಕಡಿವಾಣ ಹಾಕುವ ಉದ್ದೇಶ ಸರ್ಕಾರಕ್ಕಿದೆ ಎಂದು ಹೇಳಿದರು.
ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮೊಬೈಲ್ ಆಪ್ ಆಧಾರಿತ ಧನ ಸಹಾಯ ಮಾಡುವ ಹಿನ್ನಲೆಯಲ್ಲಿ ಭೇಟಿ ನೀಡಿದ ಸಚಿವರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಮಾರುಕಟ್ಟೆ ವ್ಯಾಪಾರಿಗಳ ಬಳಿ ಮಾತುಕತೆ ನಡೆಸಿದರು.
ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳ ಅಹವಾಲು ಸ್ವೀಕರಿಸಿದರು. ಸಚಿವ ಬಂಡೆಪ್ಪ ಕಾಶೆಂಪೂರಗೆ ಕೃಷಿ ಉತ್ಪನ್ನ ಅಧಿಕಾರಿಗಳು ಸಾಥ್ ನೀಡಿದರು.
ಇನ್ನು ಬಡವರ ಬಂಧು ಎನ್ನುವ ಶೀರ್ಷಿಕೆ ಅಡಿಯಲ್ಲಿ ಯೋಜನೆ ಜಾರಿಗೆ ಚಿಂತನೆ ನಡೆದಿದ್ದು,ಸಿಎಂ ಹೆಚ್.ಡಿ. ಕುಮಾರಸ್ವಾಮಿ ವ್ಯಾಪಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ಈ ವೇಳೆ ಹಲವು ವ್ಯಾಪಾರಿಗಳು ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ಸಮಸ್ಯೆ ಹೇಳಿಕೊಂಡಿದ್ದಾರೆ.ಲಲಿತಮ್ಮ ಎಂಬವರು ಸಿಎಂ ಹೆಚ್‍ಡಿಕೆ ಜತೆ ಮಾತನಾಡಿ,10 ಸಾವಿರ ರೂಪಾಯಿಗಳ ಸಹಾಯ ಅಗತ್ಯವಿದೆ ಎಂದು ಕೋರಿದರು.
ಆದರೆಬಡ್ಡಿ ರಹಿತ ಸಾಲ ನೀಡುವುದಾಗಿ ಸಿಎಂ ತಿಳಿಸಿದರು. ನಂತರ ಪಟಾಲಮ್ಮ ಎಂಬವರೂ ತಮ್ಮ ಕಷ್ಟ ನೆನೆದು ಕಣ್ಣೀರಿಟ್ಟರು. ಲಕ್ಷ್ಮಮ್ಮ ಎಂಬವರು ಸಮಸ್ಯೆ ತೋಡಿಕೊಂಡರು.
ಎಲ್ಲರಿಗೂ ಆರ್ಥಿಕ ನೆರವಿನ ಭರವಸೆ ನೀಡಿದ ಮುಖ್ಯಮಂತ್ರಿ,ಬಡ ವ್ಯಾಪಾರಿಗಳಿಗೆ ಸರ್ಕಾರ ಬಡ್ಡಿ ರಹಿತ ಸಾಲ ನೀಡುತ್ತದೆ. ಕೊಟ್ಟ ಸಾಲವನ್ನು ಸರಿಯಾಗಿ ಪಾವತಿ ಮಾಡಿ.ಪ್ರಾಮಾಣಿಕತೆಯಿಂದ ನಡೆದುಕೊಳ್ಳಿ.ಎಲ್ಲರೂ ಪ್ರಾಮಾಣಿಕವಾಗಿದ್ದರೆ ರಾಜ್ಯಾದ್ಯಂತ ಎಲ್ಲ ವ್ಯಾಪಾರಿಗಳ ಕಷ್ಟ ನೀಗುತ್ತದೆ. ವ್ಯಾಪಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೈತರು,ಕೃಷಿ ಕಾರ್ಮಿಕರು ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರ ಖಾಸಗಿ ಸಾಲ ಮನ್ನಾ ಮಾಡುವ ಕರ್ನಾಟಕ ಋಣ ಮುಕ್ತ ಕಾಯ್ದೆಗೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸಂಪುಟ ಅನುಮೋದನೆ ನೀಡಿದೆ.ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗುತ್ತಿದ್ದು, ಸಿಎಂ ಎಚ್ಡಿಕೆ ರಾಷ್ಟ್ರಪತಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

loading...