ಮುಂದುವರೆದ ಕಬ್ಬು ಬೆಳೆಗಾರರ ಪ್ರತಿಭಟನೆ

0
20

ಕನ್ನಡಮ್ಮ ಸುದ್ದಿ-ಹಳಿಯಾಳ: ಇಲ್ಲಿನ ಸಕ್ಕರೆ ಕಾರ್ಖಾನೆ ಎದುರು ಕಬ್ಬು ಬೆಳೆಗಾರರು ಕಳೆದ 18 ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದರೂ ಸಹ ಕ್ಷೇತ್ರದ ಜನಪ್ರತಿನಿಧಿಯಾಗಿರುವ ಸಚಿವ ಆರ್‌.ವಿ. ದೇಶಪಾಂಡೆಯವರು ಧರಣಿ ಸ್ಥಳಕ್ಕೆ ಬರದೇ ಇರುವುದನ್ನು ಖಂಡಿಸುವದಾಗಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ರಾಜ್ಯ ಉಪಾಧ್ಯಕ್ಷ ಹುದ್ದೆಯಲ್ಲಿರುವ ಸ್ಥಳೀಯರಾದ ಎಂ.ವಿ. ಘಾಡಿ, ಹಿರಿಯ ಮುಖಂಡ ಯು.ಕೆ. ಬೋಬಾಟಿ ಮೊದಲಾದವರು ಗುರುವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಕ್ಕರೆ ಕಾರ್ಖಾನೆಯವರು 2016-17ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಅನ್ವಯವಾಗುವಂತೆ 2017-18ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಕಬ್ಬು ನೀಡುವ ರೈತರಿಗೆ ಪ್ರತಿ ಟನ್‌ ಕಬ್ಬಿಗೆ 305 ರೂ. ಗಳಂತೆ ಪ್ರೋತ್ಸಾಹ ಧನದ ರೂಪದಲ್ಲಿ ನೀಡುವುದಾಗಿ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತದ ಸಮಕ್ಷಮ ತಿಳಿಸಿದ್ದು ಮಾತ್ರವಲ್ಲದೇ ಈ ಬಗ್ಗೆ ಸಕ್ಕರೆ ಕಾರ್ಖಾನೆಯವರು ವಿನಂತಿಸುವ ಕರಪತ್ರವನ್ನು ಸಹ ಮುದ್ರಿಸಿ ವಿತರಣೆ ಮಾಡಿದ್ದರು. ಆದರೆ ಕಬ್ಬು ನುರಿಸುವ ಹಂಗಾಮು ಮುಕ್ತಾಯಗೊಂಡು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಬರುತ್ತಿದ್ದರೂ ಸಹ ನೀಡಬೇಕಾದ ಪ್ರೋತ್ಸಾಹ ಧನದ ಮೊತ್ತ ನೀಡದೇ ಇರುವುದನ್ನು ಖಂಡಿಸಿ ಸಕ್ಕರೆ ಕಾರ್ಖಾನೆ ಎದುರು ಆಗಸ್ಟ್‌ 6 ರಿಂದ ಕಬ್ಬು ಬೆಳೆಗಾರ ರೈತರ ನಿರಂತರ ಧರಣಿ ನಡೆಯುತ್ತಿದೆ. ಆದರೆ ಸಕ್ಕರೆ ಕಾರ್ಖಾನೆಯವರು ಇನ್ನೂವರೆಗೂ ತಮ್ಮ ಮಾತಿನಂತೆ ನಡೆದುಕೊಳ್ಳದೇ ಮೊಂಡು ಧೋರಣೆ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಸಂಘದ ಹಳಿಯಾಳ ಹಾಗೂ ಕಲಘಟಗಿ ಪ್ರದೇಶದ ನಿಯೋಗವು ಮೊನ್ನೆ ಆಗಸ್ಟ್‌ 20 ರಂದು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಕ್ಕರೆ ಸಚಿವ ಕೆ.ಜೆ. ಜಾರ್ಜ್‌ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳಿಂದ ಸ್ಪಂದನೆಯ ನಿರೀಕ್ಷೆಯಿದ್ದು ಒಂದಾನುವೇಳೆ ಅವರಿಂದ ಸೂಕ್ತ ಸ್ಪಂದನೆ ಬರದಿದ್ದರೆ ಸಾವಿರಾರು ಸಂಖ್ಯೆಯ ರೈತರು ಬೆಂಗಳೂರಿಗೆ ತೆರಳಿ ರಾಜಧಾನಿಯಲ್ಲಿ ಬೃಹತ್‌ ಪ್ರತಿಭಟನೆ ಮಾಡಲು ನಿರ್ಧರಿಸುತ್ತಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌.ಕೆ. ಗೌಡಾ, ಜೀವಪ್ಪಾ ಭಂಡಾರಿ, ತಾಲೂಕ ಪಂಚಾಯತ ಸದಸ್ಯ ಗಿರೀಶ ಟೋಸೂರ, ಕೃಷ್ಣಾ ದುಗ್ಗಾಣಿ ಮೊದಲಾದವರಿದ್ದರು.
-: ದೇಶಪಾಂಡೆ, ಘೋಟ್ನೇಕರ ಬಗ್ಗೆ ಆಕ್ರೋಶ :-
ಕಬ್ಬು ಬೆಳೆಗಾರ ರೈತರು ತಮ್ಮ ನ್ಯಾಯಯುತ ಬೇಡಿಕೆಗಾಗಿ ಕಳೆದ 18 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಸಹ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಹಿರಿಯ ಸಚಿವ ಹುದ್ದೆಯಲ್ಲಿರುವ ಆರ್‌.ವಿ. ದೇಶಪಾಂಡೆಯವರು ಧರಣಿ ಸ್ಥಳಕ್ಕೆ ಬಂದು ಭೇಟಿ ನೀಡುವ ಕನಿಷ್ಠ ಸೌಜನ್ಯತೆಯನ್ನು ತೋರಿಸದೇ ನಿರ್ಲಕ್ಷ್ಯ ವಹಿಸಿರುವುದನ್ನು ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಖಂಡಿಸುವದಾಗಿ ತಿಳಿಸಿದರು. ತಹಶೀಲ್ದಾರ ಕಚೇರಿಯಲ್ಲಿ ಏರ್ಪಡಿಸಲಾಗುತ್ತಿದ್ದ ತಾಲೂಕಾಡಳಿತ, ಕಬ್ಬು ಬೆಳೆಗಾರರ ಸಂಘ ಹಾಗೂ ಸಕ್ಕರೆ ಕಾರ್ಖಾನೆ ಇವರುಗಳ ಸಭೆಯಲ್ಲಿ ಪಾಲ್ಗೊಂಡು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಇವರು ಸಹ ರೈತರ ಧರಣಿ ಸ್ಥಳಕ್ಕೆ ಬಾರದಿರುವದು ವಿಷಾದನೀಯ ಸಂಗತಿಯಾಗಿದೆ. ಸಂಸದರಾದ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಾಗಲಿ ಯಾವುದೇ ಪಕ್ಷಗಳ ಅಧ್ಯಕ್ಷರುಗಳಾಗಲಿ, ಮಾಜಿ ಶಾಸಕ ಸುನೀಲ ಹೆಗಡೆಯವರಾಗಲಿ ಪ್ರತಿಭಟನಾ ಸ್ಥಳಕ್ಕೆ ಬಾರದೇ ನಿರ್ಲಕ್ಷ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

loading...