ಮುದ್ರಣಗಳ ಮೇಲೆ ಪ್ರಕಾಶಕರ ಹೆಸರು ಕಡ್ಡಾಯವಾಗಿ ಪ್ರಕಟಿಸುವಂತೆ ಜಿಲ್ಲಾಧಿಕಾರಿ ಸೂಚನೆ

0
39

ಕನ್ನಡಮ್ಮ ಸುದ್ದಿ-ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಪಟ್ಟಂತೆ ಮುದ್ರಿಸಲಾಗುವ ಭಿತ್ತಿಪತ್ರ, ಪೋಸ್ಟರ್, ಕಿರುಹೊತ್ತಿಗೆ, ಬ್ಯಾನರ್‍ಗಳು ಸೇರಿದಂತೆ ಮುದ್ರಣ ಸಾಮಗ್ರಿಗಳ ಮೇಲೆ ಮುದ್ರಕರು, ಪ್ರಕಾಶಕರ ಹೆಸರು ಕಡ್ಡಾಯವಾಗಿ ಪ್ರಕಟಿಸುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ ರಾಜಿಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ವಿವಿಧ ಮುದ್ರಣಾಲಯದ ಮಾಲೀಕರೊಂದಿಗೆ ಸಭೆ ನಡೆಸಿದ ಅವರು, ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಕರಪತ್ರಗಳು, ಭಿತ್ತಿಪತ್ರಗಳು ಸೇರಿದಂತೆ ಮುದ್ರಣ ಮಾಡುವ ಮುದ್ರಕರ ಗುರುತನ್ನು ದೃಢೀಪಡಿಸುವ ದೃಷ್ಟಿಯಿಂದ ಮುದ್ರಣ ಸಾಮಗ್ರಿಗಳ ಮೇಲೆ ನಿಬಂಧನೆಗಳನ್ನು ವಿಧಿಸಲಾಗಿದ್ದು, ಮುದ್ರಣ ಸಾಮಗ್ರಿಗಳ ಮೇಲೆ ಕಡ್ಡಾಯವಾಗಿ ವಿವರವನ್ನು ಪ್ರಕಟಿಸುವಂತೆ ಮುದ್ರಣ ಮಾಲೀಕರಿಗೆ ತಿಳಿಸಿದ ಅವರು, ನಿಯಮವನ್ನು ಉಲ್ಲಂಘಿಸಿ ಮುದ್ರಿಸುವವರ ಮೇಲೆ 6 ತಿಂಗಳುಗಳಿಗೆ ವಿಸ್ತರಿಸಬಹುದಾದಂತಹ ಅವಧಿಯ ಕಾರಾವಾಸ ಅಥವಾ 2000 ರೂ.ಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ಅಥವಾ ಈ ಎರಡೂ ದಂಡನೆಗೊಳಪಡಿಸಲು ಅವಕಾಶವಿದೆ ಎಂದು ಹೇಳಿದರು.

ಯಾವುದೇ ಚುನಾವಣಾ ಕರಪತ್ರಗಳು, ಭಿತ್ತಿಪತ್ರಗಳು ಇತ್ಯಾದಿ ಮುದ್ರಿಸುವ ಮುಂಚಿತವಾಗಿ ಮುದ್ರಕರು ನಿಬಂಧನೆಗಳಿಗೆ ಒಳಪಟ್ಟು ಪ್ರಕಾಶಕನಿಂದ ಒಂದು ಘೋಷಣೆಯನ್ನು ಪಡೆದುಕೊಳ್ಳಬೇಕು. ಘೋಷಣೆಗೆ ಪ್ರಕಾಶಕನು ಸಹಿ ಹಾಕುವ ಜೊತೆಗೆ ಪ್ರಕಾಶಕನಿಗೆ ಪರಿಚಯವಿರುವ ಇಬ್ಬರೂ ವ್ಯಕ್ತಿಗಳು ಅದನ್ನು ದೃಢೀಕರಿಸಬೇಕು. ಜಿಲ್ಲೆಯ ಜಿಲ್ಲಾ ದಂಡಾಧಿಕಾರಿಗಳು ಈ ಕುರಿತು ಸೂಕ್ತ ಪರಿಶೀಲನೆ ಸಹ ನಡೆಸಲಿದ್ದು, ಕಾರಣ ಮುಂಬರುವ ದಿನಗಳಲ್ಲಿ ಬರುವ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹಾಗೂ ಮುದ್ರಕರು ಸಹಕಾರ ನೀಡುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಸನ್ನ ಸೇರಿದಂತೆ ವಿವಿಧ ಪಕ್ಷದ ಪ್ರತಿನಿಧಿಗಳು, ಮುದ್ರಣ ಮಾಲೀಕರು ಉಪಸ್ಥಿತರಿದ್ದರು.

loading...