ಮೈತ್ರಿ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ -ಬಿ.ಎಸ್.ಯಡಿಯೂರಪ್ಪ,

0
25

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ನೂರು ದಿನದ ಸಾಧನೆ ಶೂನ್ಯವಾಗಿದೆ. ಮೈತ್ರಿ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ ಎಂದು ಬಿಜೆಪಿ, ರಾಜ್ಯ ಸರ್ಕಾರದ ನೂರು ದಿನವನ್ನು ಟೀಕಿಸಿದೆ.
ಮೈತ್ರಿ ಸರ್ಕಾರ 100 ದಿನ ಪೂರೈಸಿರುವ ಕುರಿತು, ಸರ್ಕಾರದ ಕಾರ್ಯವೈಖರಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಈ ರೀತಿಯಾಗಿ ಜನಹಿತವನ್ನು ಮರೆತ ಬೇಜವಾಬ್ದಾರಿ ಸರ್ಕಾರವನ್ನು ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬರೀ ಪಕ್ಷದ ಆಂತರಿಕ ಕಚ್ಚಾಟ, ಹೊಡೆದಾಟದಲ್ಲಿಯೇ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳ ಮುಖಂಡರು, ಸರ್ಕಾರದ ಪ್ರತಿನಿಧಿಗಳು ಕಾಲಹರಣ ಮಾಡುತ್ತಿದ್ದಾರೆ. ಕೊಡಗಿನಲ್ಲಿ ನೆರೆಹಾನಿ ಸಂಭವಿಸಿ ಅಪಾರ ಹಾನಿ ಸಂಭವಿಸಿದ್ದರೆ, ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಜನರು ಬರಗಾಲದಿಂದ ತತ್ತರಿಸುತ್ತಿದ್ದಾರೆ.
ಇಷ್ಟಾದರೂ ಯಾವ ಮಂತ್ರಿಯೂ ರಾಜ್ಯ ಪ್ರವಾಸ ಮಾಡುತ್ತಿಲ್ಲ.ಸಂಕಷ್ಟಕ್ಕೆ ಸಿಲುಕಿರುವ ಜನರ ಅಹವಾಲು ಸ್ವೀಕಾರ ಮಾಡುತ್ತಿಲ್ಲ. ವಿಧಾನಸೌಧದಲ್ಲಿಯೂ ಸಚಿವರು ಇಲ್ಲ. ಇವರೆಲ್ಲಾ ಏನು ಮಾಡುತ್ತಿದ್ದಾರೆ ಎಂದು ತರಾಟೆ ತೆಗೆದುಕೊಂಡರು.
ಮೈತ್ರಿ ಸರ್ಕಾರದ ಅವಧಿಯಲ್ಲಿ ಯಾವ ಅಭಿವೃದ್ಧಿ ಕಾರ್ಯಕ್ಕೂ ಹಣ ಬಿಡುಗಡೆಯಾಗುತ್ತಿಲ್ಲ.ನೆರೆಹಾನಿಗೆ ಶಾಸಕರ ನಿಧಿಯಿಂದ 50ಲಕ್ಷ ಕೊಟ್ಟಿರೋದೆ ಈ ಸರ್ಕಾರದ ಸಾಧನೆಯಾಗಿದೆ.ಯಾವುದೇ ಶಾಸಕರ ಕ್ಷೇತ್ರದಲ್ಲಿಯೂ ಏನೂ ಅಭಿವೃದ್ಧಿ ಕಾರ್ಯ ಆಗು ತ್ತಿಲ್ಲ.ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಯಾವ ಸಚಿವರಿಗೂ ಆಸಕ್ತಿ ಇಲ್ಲ.ಈಗಾಗಲೇ ಆಗಸ್ಟ್ ತಿಂಗಳು ಮುಗಿದು ಹೋಯಿತು.100ದಿನವೂ ಸರ್ಕಾರಕ್ಕೆ ಆಯಿತು. ಆದರೂ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸದೇ ಬರೀ ಅವರವರ ಆಂತರಿಕ ಕಲಹವನ್ನು ಸರಿಪಡಿಸಿಕೊಳ್ಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ದಪ್ಪ ಚರ್ಮದ ಸರ್ಕಾರವಾಗಿದೆ.ಈ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ಗಳು ಆಗುತ್ತಿಲ್ಲ.ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸುವುದೇ ತಪ್ಪು ಎಂದರೂ ತಪ್ಪಾಗಲ್ಲ ಎಂದು ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತರಾಟೆ ತೆಗೆದುಕೊಂಡರು.

loading...