ಮೌನದಿಂದ ಮನಸ್ಸು ನಿಗ್ರಹಿಸಲು ಸಾಧ್ಯ: ತೋಂಟದ ಶ್ರೀಗಳು

0
28

ನರಗುಂದ: ಲೋಕ ಕಲ್ಯಾಣಾರ್ಥವಾಗಿ ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮಿಗಳು ಇದುವರೆಗೂ 9 ಮೌನಾನುಷ್ಟಾನ ಕಾರ್ಯಕ್ರಮ ನಡೆಸಿದ್ದಾರೆ. ಇದು ಎಲ್ಲ ಸ್ವಾಮಿಗಳಲ್ಲಿ ಬರುವ ಶ್ರಮಿಕದಾಯಕ ಕಾರ್ಯ ಅಲ್ಲ. ಅದಕ್ಕಾಗಿ ಸಾಧನೆ ಬೇಕು. ಇದನ್ನು ಮಾಡಿದ ತೋರಿದವರು ಶಾಂತಲಿಂಗ ಸ್ವಾಮಿಗಳು ಎಂದು ಗದಗ ತೋಂಟದಾರ್ಯ ಮಠದ ತೋಂಟದ ಸಿದ್ದಲಿಂಗ ಸ್ವಾಮಿಗಳು ಹೇಳಿದರು.
ತಾಲೂಕಿನ ಸಮೀಪದ ಗೋವನಕೊಪ್ಪ ಗ್ರಾಮದ ಬಹ್ಮಾನಂದ ಮಠದಲ್ಲಿ ಭೈರನಹಟ್ಟಿ ವಿರಕ್ತಮಠದ ಶಾಂತಲಿಂಗ ಸ್ವಾಮಿಗಳು ಒಂದು ತಿಂಗಳ ಪರ್ಯಂತ ಹಮ್ಮಿಕೊಂಡ ಮೌನ ಲಿಂಗಾನುಷ್ಟಾನ ಮಂಗಲೋತ್ಸವ ಕಾರ್ಯಕ್ರಮ ಜೂ. 14 ನಡೆದ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಸ್ವಾಮಿಗಳಾದವರು ಸಮಾಜಕ್ಕೆ ಬಹು ಹತ್ತಿರಕ್ಕೆ ಇರಬೇಕು. ಸ್ವಾಮಿಗಳಲ್ಲಿ ಪೂಜಾ ವಿಧಿವಿಧಾನಗಳಿದ್ದರೆ ಮಾತ್ರ ಸಾಲದು. ಸಮಾಜದ ಒಳಿತು,ಕೆಡಕುಗಳನ್ನು ತುಲನಾತ್ಮಕವಾಗಿ ವೈಚಾರಿಕತೆ ಮೂಲಕ ಅನುಭವದ ಶುದ್ದ ಹಾದಿಗೆ ತರಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಮೌನಾನುಷ್ಟಾನ ಮಂಗಲಗೊಳಿಸಿದ ಶಾಂತಲಿಂಗ ಸ್ವಾಮಿಗಳು ಆಶಿರ್ವಚನ ನೀಡಿ, ಗಾಳಿ ಬೆಳಕಿಗಿಂತಲೂ ವೇಗವಾದ ಮನಸ್ಸನ್ನು ನಿಗ್ರಹಿಸುವ ಕಾರ್ಯವನ್ನು ಮೌನದಿಂದ ಮಾಡಲು ಸಾಧ್ಯ. ಅನುಷ್ಟಾನವೆನ್ನುವುದು ಕೇವಲ ಸ್ವಾಮಿಗಳಿಗೆ ಮಾತ್ರ ಸಿಮಿತವಲ್ಲ. ಭಕ್ತರು ಉತ್ತಮ ಉದ್ದೇಶಿತ ಕಾರ್ಯಗಳಿಗಾಗಿ ಮೌನಾನುಷ್ಟಾನ ಮಾಡಬಹುದಾಗಿದೆ. ನಾವೆಲ್ಲ ನಡೆದು ಬಂದ ದಾರಿ ಸ್ವಲ್ಪವಾದರೂ ಕೂಡಾ ಇನ್ನು ನಡೆದು ಗುರಿ ಮುಟ್ಟುವ ಹಾದಿ ದೂರವಿದೆ. ಸ್ವಾಮಿಗಳಾದವರೂ ಕ್ರೀಯಾಶೀಲವಾಗಿದ್ದರೆ ಮಾತ್ರ ಮಠ, ಮಂದಿರಗಳನ್ನು ಪ್ರಗಥಿಗೆ ತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೊಣ್ಣೂರ ವಿರಕ್ತಮಠದ ಡಾ. ಶಿವಕುಮಾರ ಸ್ವಾಮಿಗಳು, ಪತ್ರಿವನಮಠದ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು ಮಾತನಾಡಿದರು. ಕಲ್ಮಠದ ಸಿದ್ದಲಿಂಗ ಶಿವಾಚಾರ್ಯರು, ನರಸಾಪೂರದ ಮರುಳ ಸಿದ್ದಲಿಂಗ ಶಿವಾಚಾರ್ಯರು, ಅವರಾದಿಯ ಶಿವಕುಮಾರ ಸ್ವಾಮಿಗಳು, ಬೆಳಗಾವಿಯ ಶಿವಯೋಗಿ ದೇವರು, ದೇವರಸೀಗಿಹಳ್ಳಿಯ ವಿರೇಶ್ವರ ದೇವರು, ಕೆ.ಡಿ ಬೀಜಾಪೂರ, ಡಾ. ಜೀನದತ್ತ ಹಡಗಲಿ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ ಕಾರ್ಯಕ್ರಮದ ವೇದಿಕೆ ಮೇಲೆ ಉಪಸ್ಥಿತರಿದ್ದರು.

loading...