ಯುವಕರು ರಕ್ತದಾನ ಮಾಡಲು ಮುಂದಾಗಿ

0
20

ಕನ್ನಡಮ್ಮ ಸುದ್ದಿ-ಮುಂಡರಗಿ: ಇಂದ್ರೀಯಗಳಲ್ಲಿ ಕಣ್ಣು ತುಂಬಾ ಶ್ರೇಷ್ಠವಾಗಿದ್ದು, ಸತ್ತ ನಂತರ ನಾವು ಅದನ್ನು ಇತರರಿಗೆ ದಾನ ಮಾಡಬೇಕು. ನೇತ್ರ ರೋಗಗಳನ್ನು ಅಲಕ್ಷಿಸದೆ ರೋಗ ಬಂದ ತಕ್ಷಣ ಸಮೀಪದ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಆಯುಷ್ಯ ಇಲಾಖೆಯಲ್ಲಿ ವಿವೇಕ ಜಾಗೃತ ಬಳಗೆ ಸೇರಿದಂತೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ಏರ್ಪಡಿಸಿದ್ದ 40ನೇ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮರಣದ ನಂತರ ನಮ್ಮ ದೇಹದ ಜೊತೆಗೆ ನಮ್ಮ ಎಲ್ಲ ಇಂದ್ರೀಯಗಳು ನಾಶವಾಗುತ್ತವೆ. ನಮ್ಮ ಅಂಗಾಂಗಳನ್ನು ಮಣ್ಣು ಮಾಡುವ ಬದಲಾಗಿ ಅವುಗಳನ್ನು ಇತರರಿಗೆ ದಾನ ಮಾಡಬೇಕು. ಆ ಮೂಲಕ ನಾವು ಇತರ ಬದುಕಿಗೆ ಬೆಳಕು ನೀಡಬೇಕು ಎಂದು ಸಲಹೆ ನೀಡಿದರು. ಸುಜಲಾನ್‌ ಕಂಪನಿಯ ಸೈಟ್‌ ನಿರ್ವಾಹಕ ನಾಗಭೂಷಣ ಮಾತನಾಡಿ, ಜಗತ್ತಿಹ ಲಕ್ಷಾಂತರ ರೋಗಿಗಳಿಗೆ ಕಣ್ಣು, ಮೂತ್ರಪಿಂಡ, ರಕ್ತ ಮೊದಲಾದವುಗಳ ಅಗತ್ಯವಿದೆ. ಆದ್ದರಿಂದ ಯುವಕರು ನೇತ್ರ ಹಾಗೂ ರಕ್ತ ದಾನಕ್ಕೆ ಮುಂದಾಗಬೇಕು. ಆ ಮೂಲಕ ಸಮಾಜ ಸೇವೆ ಮಾಡಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಯುಷ್ಯ ಇಲಾಖೆಯ ವೈದ್ಯ ಡಾ.ಬಸವರಾಜ ಕುಂಬಾರ ಮಾತನಾಡಿ, ಪಟ್ಟಣದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳ ಕಾರ್ಯಕರ್ತರು ಕಳೆದ ಹಲವು ವರ್ಷಗಳಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಡಾ. ಪಿ.ಬಿ.ಹಿರೇಗೌಡರ, ಡಾ. ಡಿ.ಎ.ದೇಸಾಯಿ, ಡಾ. ಎಂ.ಎಂ. ನೇಹಾ, ಬಿ.ಸಿ.ನಾಡಗೌಡರ, ಎಸ್‌.ವೈ.ವಾಡಗೌಡರ, ಎಂ.ಜಿ.ಗಚ್ಚಣದಣವರ, ಪವಗನ ಕುಲಕರ್ಣಿ ಮೊದಲಾದವರು ಹಾಜರಿದ್ದರು. ಶಿಬಿರದಲ್ಲಿ ಒಟ್ಟು 60ರೋಗಿಗಳನ್ನು ತಪಾಸಣೆ ಮಾಡಲಾಯಿತು. ಶಸ್ತ್ರ ಚಿಕಿತ್ಸೆಗಾಗಿ 46ಜನರನ್ನು ಹಿಬ್ಬಳ್ಳಿಗೆ ಕಳುಹಿಸಿಕೊಡಲಾಯಿತು.

loading...