ರಾಜ್ಯದಲ್ಲಿ 22 ಸ್ಥಾನ ಗೆಲುವು ಖಚಿತ, ಮೋದಿ ಮತ್ತೊಮ್ಮೆ ಪ್ರಧಾನಿ : ಬಿ.ಎಸ್.ಯಡಿಯೂರಪ್ಪ

0
9

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ‌ ಸರ್ಕಾರದ ಸಾಧನೆ , ರಾಜ್ಯದ ಮೈತ್ರಿ ಸರ್ಕಾರದ ವೈಫಲ್ಯ ಹಾಗೂ ಬಿಜೆಪಿ‌ ಅಧಿಕಾರಕ್ಕೆ‌ ಬಂದರೆ ಭವಿಷ್ಯದ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳೇ ಶ್ರೀರಕ್ಷೆಯಾಗಿದೆ. ಕಳೆದ ಭಾರಿ ಭ್ರಷ್ಟಾಚಾರ ಮುಕ್ತ ಸರ್ಕಾರ, ಅಭಿವೃದ್ಧಿಯಲ್ಲಿ ದಾಪುಗಾಲು, ದೇಶದ ಗಡಿಗಳ ರಕ್ಷಣೆ, ವಿದೇಶದಲ್ಲಿ ಭಾರತಕ್ಕೆ ಗೌರವ ತರುವ ಕೆಲಸ ಮಾಡುವ ಹಾಗೂ ಅಂತಾರಾಷ್ಟ್ರೀಯ ಭಾಂಧವ್ಯ ಬಲವರ್ಧನೆಗೊಳಿಸುವ ನಾಲ್ಕು ಅಂಶಗಳ ಭರವಸೆಯನ್ನು ಮುಂದಿಟ್ಟು ಚುನಾವಣೆ ಎದುರಿಸಿದ್ದೆವು. ಅಂತೆಯೇ ಎಲ್ಲಾ ವಾಗ್ದಾನಗಳನ್ನು ಈಡೇರಿಸಿದ್ದೇವೆ ಎಂದರು.

ಭಾರತ ದೇಶ ಸಾಕಷ್ಟು ಬದಲಾಗಿದೆ ಇದಕ್ಕೆ ಪ್ರಧಾನಿ ಮೋದಿ‌ ಅವರ ದಿಟ್ಟ ನಿಲುವು ಕಾರಣ. ಪುಲ್ವಾಮಾ ಘಟನೆಯಿಂದಾಗಿ ಜಗತ್ತಿನ ಹಲವು ರಾಷ್ಟ್ರಗಳು ಭಾರತವನ್ನು ಬೆಂಬಲಿಸಿವೆ‌. ದೇಶದಲ್ಲಿ ಗುಣಾತ್ಮಕ ಬದಲಾವಣೆ ಕಂಡು ಬಂದಿದೆ. ವಿಶ್ವದ ಇತರ ರಾಷ್ಟ್ರಗಳ ಎದುರು ಭಾರತ ಸೆಟೆದು ನಿಲ್ಲುವಂತೆ ಪ್ರಧಾನಿ ಮಾಡಿದ್ದಾರೆ. ನಾಲ್ಕೂ ಮುಕ್ಕಾಲು ವರ್ಷದ ಸಾಧನೆ ನಮಗೆ ರಕ್ಷಣಾ ಕವಚವಾಗಿದೆ. ಹಿಂದಿನ ಸರ್ಕಾರಗಳಿಂದ ಮಾಡಲಾಗದ ಸಾಧನೆಯನ್ನು ಐದು ವರ್ಷದಲ್ಲಿ ಎನ್ ಡಿಎ ಸರ್ಕಾರ ಮಾಡಿದೆ. ಮೋದಿ ಅವರ ನಾಯಕತ್ವ ಇಡೀ ವಿಶ್ವಕ್ಕೆ ಮಾದರಿ, ಜಗತ್ತಿನ ಅನೇಕ ರಾಷ್ಟ್ರಗಳು ಮೋದಿ ನಾಯಕತ್ವ ಕೊಂಡಾಡುತ್ತಿವೆ ಇದು ಶ್ಲಾಘನೀಯ ಮತ್ತು ಹೆಮ್ಮೆ ಪಡುವ ವಿಷಯ ಎಂದರು.

ಮೋದಿ ಆರ್ಥಿಕ ನೀತಿ ಅನೇಕ ರಾಷ್ಟ್ರಗಳನ್ನು ಬೆರಗುಗೊಳಿಸುವಂತೆ ಮಾಡಿದೆ. ಬಿಜೆಪಿ ಅಧಿಕಾರ ಹಿಡಿದಾಗ ದೇಶದ ಆರ್ಥಿಕ‌ ಪರಿಸ್ಥಿತಿ ಹದಗೆಟ್ಟಿತ್ತು, ಈಗ ಸೋರಿಕೆ ತಡೆಗಟ್ಟಿದ ಪರಿಣಾಮ ಮುಂದುವರಿದ ದೇಶವಾದ ಫ್ರಾನ್ಸ್ ನ್ನು ಆರ್ಥಿಕ ಪ್ರಗತಿಯಲ್ಲಿ ಹಿಂದಿಕ್ಕಿದ್ದೇವೆ. ದೇಶದ ಪ್ರಗತಿ ಅಮೇರಿಕಾ ಚೀನಾಗೆ ಸರಿ ಸಮವಾಗಿ ಗೋಚರಿಸುತ್ತಿದೆ ಎಂದರು.

ಪಾಕಿಸ್ತಾನವನ್ನು ಜಗತ್ತಿನ ಎಲ್ಲ ದೇಶಗಳೂ ಖಂಡಿಸಿವೆ. ಭಯೋತ್ಪಾದಕ ರಾಷ್ಟ್ರವೆಂಬ ಹಣೆಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ವಿಶ್ವಮನ್ನಣೆ ದೊರಕಿದೆ. ಪ್ರಧಾನಿ ಮೋದಿ ಅವರ ರಾಜತಾಂತ್ರಿಕ ಗೆಲುವು ಇದಾಗಿದೆ. ಭಾರತ ಇನ್ನೆಂದೂ ಬೆನ್ನು ಬಾಗಿಸುವುದಿಲ್ಲ, ಬದಲಾಗಿ ಸೆಟೆದು ನಿಲ್ಲುವ ದೇಶವಾಗಿರುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಸಾಧನೆ ಕಾರಣ ಎಂದು ಯಡಿಯೂರಪ್ಪ ವಿವರಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ 2ಜಿ, 3ಜಿ, ಕಲ್ಲಿದ್ದಲು ಖರೀದಿ, ಹೆಲಿಕ್ಯಾಪ್ಟರ್ ಖರೀದಿ, ಹೀಗೆ ಸಾಲುಸಾಲು ಹಗರಣಗಳು ದೇಶಕ್ಕೆ ಕಳಂತ ತಂದಿದ್ದವು. ಆದರೆ ಮೋದಿ ನೇತೃತ್ವದ ಸರ್ಕಾರದಲ್ಲಿ ಒಂದೂ ಹಗರಣಗಳು ನಡೆದಿಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡುವಲ್ಲಿ ಪ್ರಧಾನಿ ಯಶಸ್ವಿಯಾಗಿದ್ದಾರೆ. ದೇಶ ಪ್ರತಿಯೊಬ್ಬ ನಾಗರೀಕರಿಗೂ ಬಿಜೆಪಿ ಸರ್ಕಾರದ ಒಂದಲ್ಲಾ ಒಂದು ಯೋಜನೆ ತಲುಪಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 12.5 ಕೋಟಿ ರೈತರಿಗೆ ಪ್ರತಿ ವರ್ಷ ಆರು ಸಾವಿರ ರೂ ಸಹಾಯಧನ ನೀಡುವ ಪ್ರಧಾನ ಮಂತ್ರಿ ಕೃಷಿಕ್ ಸಮ್ಮಾನ್ ಯೋಜನೆ ನೀಡಿದ್ದಾರೆ.ಇದಕ್ಕಾಗಿ 72,000 ಕೋಟಿ ತೆಗೆದಿಟ್ಟು ನಾಲ್ಕು ತಿಂಗಳಿಗೊಮ್ಮೆ ಪ್ರತೀ ರೈತರಿಗೆ 2000ರೂ ನೇರೆ ನಗದು ವರ್ಗಾವಣೆ ಮಾಡಲಾಗಿದೆ ಎಂದರು.

ಸೈನಿಕರಿಗಾಗಿ ಒಂದು ಶ್ರೇಣಿ ,ಒಂದು ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಹಲವಾರು ವರ್ಷಗಳ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. ಈ ಯೋಜನೆಗಾಗಿ 3 ಲಕ್ಷ ಕೋಟಿರೂ ಮೀಸಲಿಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ರಾಜ್ಯ ಸರ್ಕಾರ ರೈತರ ಸಾಲಮನ್ನಾ ಭರವಸೆ ನೀಡಿ ಅಧಿಕಾರಕ್ಕೇರಿ 9 ತಿಂಗಳು ಕಳೆದಿದೆ. 46 ಸಾವಿರ‌ ಕೋಟಿ ಸಾಲಮನ್ನಾ ಮಾಡುವ ಹೇಳಿಕೆ‌ ನೀಡಿ‌ ಈಗ ಕೇವಲ 4.5 ಸಾವಿರ ಕೋಟಿ ಮನ್ನಾ ಮಾಡಿದ್ದೀರಿ.ಅಂತಹ ಸುಳ್ಳು ಭರವಸೆ ನೀಡದೆ ಇದ್ದರೆ 37 ಅಲ್ಲ 20 ಸ್ಥಾನ ಕೂಡ ಜೆಡಿಎಸ್ ಪಕ್ಷಕ್ಕೆ ಸಿಗುತ್ತಿರಲಿಲ್ಲ. 37 ಸ್ಥಾನ ಪಡೆದವರು ಮುಖ್ಯಮಂತ್ರಿ. 104 ಸ್ಥಾನ ಪಡೆದವರು ಪ್ರತಿಪಕ್ಷದಲ್ಲಿದ್ದೇವೆ. ಮೈತ್ರಿ ಸರ್ಕಾರದಲ್ಲಿ ಉತ್ತಮ ಹೊಂದಾಣಿಕೆ‌ಯೂ ಇಲ್ಲ. ಅಭಿವೃದ್ಧಿಗೆ ಆದ್ಯತೆಯೂ ನೀಡಿಲ್ಲ.ರಾಜ್ಯದ 160 ಕ್ಕೂ ಹೆಚ್ಚು ತಾಲೂಕಿನಲ್ಲಿ ಬರಗಾಲವಿದೆ. ಕುಡಿಯುವ ನೀರಿಲ್ಲ ,ಮೇವಿನ ಸಮಸ್ಯೆ ಇದೆ, ಕಷ್ಟ ಕೇಳಲು ವಿಧಾನಸೌಧದಲ್ಲಿ ಸಚಿವರು,ಶಾಸಕರು ಯಾರೂ ತಲೆಹಾಕುವುದಿಲ್ಲ ಎಂದು ಮೈತ್ರಿ ಸರ್ಕಾರದ ಆಡಳಿತಕ್ಕೆ ಬಗ್ಗೆ ಟೀಕಾಪ್ರಹಾರ ನಡೆಸಿದರು.

ಸಾಲಮನ್ನಾ ಬಿಡಿ ಕನಿಷ್ಟ ರಾಜ್ಯದ ಅಭಿವೃದ್ಧಿ ಯೋಜನೆಗಳಿಗಾಗಿ ಎಷ್ಟು ಆದ್ಯತೆ ನೀಡಿದ್ದಿರಿ ಎಂದು ಪ್ರಶ್ನಿಸಿದ ಯಡಿಯೂರಪ್ಪ, ನೀರಾವರಿ ಯೋಜನೆ, ಆಲಮಟ್ಟಿ‌ ಜಲಾಶಯದ ಹಿನ್ನೀರಿನಲ್ಲಿ 20 ಹಳ್ಳಿಗಳ ಸ್ಥಳಾಂತರ ಏನಾಗಿದೆ.? ಹಿಂದೆ ಕಾಂಗ್ರೆಸ್ ನಾಯಕರು ನಮ್ಮ ನಡಿಗೆ ಕೃಷ್ಣೆಯಡೆಗೆ ಎಂದಿತ್ತು ಪ್ರತಿ ವರ್ಷ 10 ಸಾವಿರ ಕೋಟಿ ಬಜೆಟ್ ನಲ್ಲಿ ನೀಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದರು. ಅದು ಭರವಸೆಯಾಗಿಯೇ ಉಳಿದಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಮಾರ್ಚ್-15 ಬಿಜೆಪಿ ಕೋರ್ ಕಮಿಟಿ ಸಭೆ :

ಮಾ.16 ಕ್ಕೆ ದೆಹಲಿಗೆ ತೆರಳಲಿದ್ದೇನೆ, ಅಂದೇ 20-22 ಸ್ಥಾನಗಳ ಮೊದಲ ಪಟ್ಟಿ ಮೊದಲು ಬಿಡುಗಡೆ ಮಾಡಲಿದ್ದೇವೆ, ನಂತರ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಶೀಘ್ರ ಬಿಡುಗಡೆಯಾಗಲಿದೆ. ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲಾ ಹಾಲಿ ಸಂಸದರಿಗೂ ಟಿಕೆಟ್ ದೊರೆಯಲಿದೆ, ಉಳಿದೆ ಕ್ಷೇತ್ರಗಳಲ್ಲಿ ಅರ್ಹರಿಗೆ ಟಿಕೆಟ್ ನೀಡಲಾಗುತ್ತದೆ ಎಂದರು.
ಮಂಡ್ಯ ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಸುಮಲತಾ ಅವರ ನಡೆಯನ್ನು ಎದುರು ನೋಡುತ್ತಿದ್ದೇವೆ. ಬಳಿಕ ಪಕ್ಷದ ನಾಯಕರ ಜೊತೆಗೆ ಚರ್ಚೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಅಂಬರೀಶ್ ನಿಧನದ ವೇಳೆ ಪಾರ್ಥಿವ ಶರೀರವನ್ನು ಮಂಡ್ಯಗೆ ಕೊಂಡೊಯ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಅಂಬರೀಶ್ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಸಚಿವ ರೇವಣ್ಣ ಸೇರಿದಂತೆ ಅನೇಕರು ಸುಮಲತಾ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಸುಮಲತಾ ಅವರ ವಿಚಾರದಲ್ಲಿ ಪಕ್ಷದ ನಿಲುವು ಕುರಿತು ಮಾದ್ಯಮಗಳ ಮುಂದೆ ಯಾವುದೇ ವಿಚಾರವನ್ನು ಬಹಿರಂಗಪಡಿಸುವುದಿಲ್ಲ ಎಂದರು.
ಮಹಾದಾಯಿ ವಿಚಾರವನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಕೊಳ್ಳುತ್ತದೆ. ರಾಜ್ಯ ಸರ್ಕಾರದ ಜವಾಬ್ದಾರಿ ಬಹಳ ಮುಖ್ಯವಾಗಿತ್ತು.ಆದರೆ ಮಹಾದಾಯಿ ಕುಡಿಯುವ ನೀರಿನ ವಿಚಾರವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ನಿಶ್ಚಿತವಾಗಿ ಈ ಬಾರಿ ಮಹಾದಾಯಿ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸಲಿದ್ದೇವೆ ಎಂದರು.

ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಡಾ.ಉಮೇಶ್ ಜಾದವ್ ಅವರ ರಾಜೀನಾಮೆ ಅಂಗೀಕಾರ ಮಾಡಿಲ್ಲ.ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿಯೇ ರಾಜೀನಾಮೆ ನೀಡಲಾಗಿದೆ. ರಾಜೀನಾಮೆ ಅಂಗೀಕಾರವಾಗಲಿದ್ದು ಜಾಧವ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದರು.

ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂಬ ಪ್ರಶ್ನಗೆ, ಎರಡು ಮೂರು ದಿನ ಕಾದು ನೋಡಿ ನಿಮಗೆ ತಿಳಿಯುತ್ತದೆ ಎಂದು ಆಪರೇಷನ್ ಕಮಲ ನಡೆಸುವ ಸುಳಿವು ನೀಡಿದರು‌

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಸ್ಥಾನ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಬಿಜೆಪಿಗೆ ಹೆಚ್ಚು ಅನುಕೂಲವೇ ಆಗಿದೆ. ಎರಡೂ ಪಕ್ಷಗಳು ಮತ್ತಷ್ಟು‌ ಕಿತ್ತಾಡಿಕೊಂಡರೆ ತಮ್ಮ ಪಕ್ಷಕ್ಕೆ ಲಾಭವಾಗಲಿದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ನಮಗೇನೂ ಚಿಂತೆ ಇಲ್ಲ.ತಮ್ಮ ಪಕ್ಷ ಅದಕ್ಕೆ ತಕ್ಕ ಪೈಪೋಟಿ ನೀಡಲಿದೆ ಎಂದರು.

ದೇವೇಗೌಡರ ಕುಟುಂಬ ರಾಜಕಾರಣದ ಕುರಿತು ಅಸಮಧಾನ ವ್ಯಕ್ತಪಡಿಸಿದ ಯಡಿಯೂರಪ್ಪ ಯಾವುದಕ್ಕೂ ಒಂದು ಮಿತಿ ಇರಲಿದೆ.ಆ ಮಿತಿಯನ್ನು ಯಾರೂ ದಾಟಬಾರದು ಎಂದು ಪರೋಕ್ಷವಾಗಿ ಗೌಡರ ಮೊಮ್ಮಕ್ಕಳ ಸ್ಪರ್ಧೆಯನ್ನು ಟೀಕಿಸಿದರು.

loading...