ರಾಜ್ಯ ಸರ್ಕಾರದ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ

0
38

ಕನ್ನಡಮ್ಮ ಸುದ್ದಿ-ಶಿರಸಿ: ಗೋರಕ್ಷಕರ ಮೇಲೆ ರಾಜ್ಯ ಸರ್ಕಾರದ ದೌರ್ಜನ್ಯ ವಿರೋಧಿಸಿ ಶಿರಸಿಯಲ್ಲಿ ಬಿಜೆಪಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶಿರಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿಗರು, ಉತ್ತರ ಕನ್ನಡದ ಹೊನ್ನಾವರದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರನ್ನು ಹಿಡಿದ ಕುಮಟಾದ ಬಿಜೆಪಿ ಯುವ ನಾಯಕ ಸೂರಜ ನಾಯ್ಕ ಸೋನಿ ಹಾಗೂ ಇನ್ನಿತರ 150ಕ್ಕೂ ಹೆಚ್ಚು ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆಯೇ 307 ಕೇಸನ್ನು ದಾಖಲಿಸಲಾಗಿದೆ. ಇದು ಬಿಜೆಪಿ ಕಾರ್ಯಕರ್ತರನ್ನು ಬಗ್ಗುಬಡಿಯಲು ರಾಜ್ಯ ಸರ್ಕಾರ ಹೂಡುತ್ತಿರುವ ವ್ಯವಸ್ಥಿತ ತಂತ್ರವಾಗಿದೆ. ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ. ಇದು ರಾಜ್ಯ ಸರ್ಕಾರದ ದೌರ್ಜನ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಬಂಧಿತರನ್ನು ಬಿಡುಗಡೆ ಮಾಡಬೇಕು. 307 ಪ್ರಕರಣ ವಾಪಸ್ ಪಡೆಯಬೇಕು ಎಂದು ಶಿರಸಿ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಶಿರಸಿ ತಾಲೂಕಾ ಅಧ್ಯಕ್ಷ ನಾಗರಾಜ ನಾಯ್ಕ, ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ, ಪ್ರಮುಖರಾದ ನಂದನಸಾಗರ, ವೀಣಾ ಭಟ್ಟ, ಪವಿತ್ರಾ ಹೊಸೂರು, ರಮಾಕಾಂತ ಭಟ್ಟ, ರಿತೇಶ ಕೆ, ವಿಜಿ ಭಟ್ಟ, ನಗರಾಜ ಸೇರಿದಂತೆ ಇತರರು ಇದ್ದರು.

loading...