ವನ್ಯಜೀವಿ ಇಲಾಖೆಯಲ್ಲಿ ಭಾರಿ ಗೋಲುಮಾಲ್

0
40

ಕನ್ನಡಮ್ಮ ಸುದ್ದಿ-ದಾಂಡೇಲಿ : ತಮಗೆ ಬೇಕಾದ ಗುತ್ತಿಗೆದಾರರಿಗೆ ಟೆಂಡರ್ ಕಾಮಗಾರಿ ನೀಡುವ ಮೂಲಕ ಲಕ್ಷಾಂತರ ರೂ ಅವ್ಯವಹಾರ ನಡೆಸುತ್ತಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಇದೀಗ ಪರಿಸರ ಪ್ರಿಯರ ಹಾಗೂ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಬರುವ ಹಳಿಯಾಳ ತಾಲೂಕಿನ ಕೇಗದಾಳ ಗ್ರಾಮದಲ್ಲಿ ಆನೆ ಹಾವಳಿಯಿಂದ ರೈತರ ಬೆಳೆ ನಾಶವಾಗುತ್ತಿರುವ ಹಿನ್ನಲೆಯಲ್ಲಿ ರೈತರ ಬೆಳೆ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ಕಳೆದ ಆರೇಳು ತಿಂಗಳ ಹಿಂದೆ ಕಾಂಕ್ರೀಟ್ ಮುಳ್ಳುಗೋಡೆ ಅರ್ಥತ್ ಆನೆ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಇದು ನಿರ್ಮಾಣವಾಗಿ ಆರು ತಿಂಗಳೊಳಗೆ ಬಿರುಕು ಬಿಟ್ಟು ಗೋಡೆ ಬೀಳುವ ಸ್ಥಿತಿಯಲ್ಲಿದೆ. ಈ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಇಲ್ಲಿ ಗುತ್ತಿಗೆದಾರ ಮತ್ತು ವನ್ಯಜೀವಿ ಇಲಾಖೆ ಒಳ ಒಪ್ಪಂದ ಮಾಡಿ ಕಾಮಗಾರಿ ಕಳಪೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೇ, ವನ್ಯಜೀವಿ ಇಲಾಖೆಯಡಿ ನಡೆಯುವ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸುವ ವಿಭಾಗ ಅಥವಾ ಅಧಿಕಾರಿಗಳು ಸಹ ಇಲ್ಲದಿರುವುದನ್ನು ನಾವು ಗಮನಿಸಬಹುದು.

ಕಾಮಗಾರಿ ಪ್ರಾರಂಭಗೊಂಡು ಅಂತಿಮ ಹಂತದಲ್ಲಿರುವಾಗ ಟೆಂಡರ್ ಕರೆದರು:
ಕಾಮಗಾರಿ ಪ್ರಾರಂಭಿಸುವ ಮುಂಚೆ ಟೆಂಡರ್ ಕರೆಯಬೇಕಾಗಿರುವುದು ನಿಯಮ. ಆದರೆ ನಮ್ಮ ಘನಾಂದರಿ ವನ್ಯಜೀವಿ ಇಲಾಖೆಯವರು ಕಾಮಗಾರಿ ಮುಕ್ತಾಯದ ಅಂತಿಮ ಹಂತದಲ್ಲಿರುವಾಗ ಟೆಂಡರ್ ಕರೆದು ಬೃಹ್ಮಾಂಡ ಭೃಷ್ಟಚಾರವನ್ನು ಸಾಭೀತು ಪಡಿಸಿಕೊಂಡಿದ್ದಾರೆ. ದಾಂಡೇಲಿಯಲ್ಲಿ ಅರಣ್ಯ ಅಧಿಕಾರಿಗಳ ವಸತಿ ನಿಲಯದ ಬಳಿ ಡಾಗ್ ಕಾಟೇಜ್ (ನಾಯಿ ಮನೆ) ಕಟ್ಟಡ ಪ್ರಾರಂಭವಾಗಿ ಇದೀಗ ಅಂತಿಮ ಹಂತದಲ್ಲಿದೆ. ಆದರೆ ಇದೇ ನಾಯಿ ಮನೆ ಕಟ್ಟಡ ಕಾಮಗಾರಿಗೆ ರೂ: 3,20,000/- ಕ್ಕೆ ಎ3/ಬಿ.ಜಿ.ಟಿ/ಸಿಆರ್-62/ದಿನಾಂಕ : 01-12-2016 ಟೆಂಡರ್ ಕರೆಯುವುದರ ಮೂಲಕ ಲೂಟಿ ಪುರಾಣ ಜಗಜ್ಜಾಹಿರಾಗಿದೆ.

ಕುಳಗಿ ವಲಯಾರಣ್ಯಾಧಿಕಾರಿ ಕಛೇರಿ ಕಟ್ಟಡದ ವಿಸ್ತರಣಾ ಕಾಮಗಾರಿಯೂ ಶೇ: 90 ರಷ್ಟು ಮುಗಿದಿದ್ದು, ರೂ: 3 ಲಕ್ಷ ವೆಚ್ಚದ ಈ ಕಾಮಗಾರಿಗೂ ಇದೀಗ ದಿನಾಂಕ: 01.12.2016 ರಂದು ಟೆಂಡರ್ ಕರೆಯಲಾಗಿದೆ. ಅದೇ ರೀತಿ ಇಪಿಟಿ (ಆನೆ ತಡೆ ಕಂದಕ) ಮತ್ತು ಸಿಪಿಟಿ (ಜಾನುವಾರು ತಡೆ ಕಂದಕ) ಕಾಮಗಾರಿ ಪ್ರಾರಂಭಗೊಂಡು ಪ್ರಗತಿಯಲ್ಲಿದೆ. ಈ ಕಾಮಗಾರಿ ಆರಂಭಗೊಂಡು ಪ್ರಗತಿಯಲ್ಲಿರುವಾಗ ಇದೀಗ ದಿನಾಂಕ: 01.12.2016 ರಂದು ಈ ಕಾಮಗಾರಿಗೂ ಟೆಂಡರ್ ಕರೆದಿರುವುದು ನಿಜಕ್ಕೂ ಆಶ್ವರ್ಯ.

ವನ್ಯಜೀವಿ ವ್ಯಾಪ್ತಿಯಲ್ಲಿ ಜೆಸಿಬಿಗಳದ್ದೆ ಘರ್ಜನೆ :
ವನ್ಯಜೀವಿ ಪ್ರದೇಶ ವ್ಯಾಪ್ತಿಯಲ್ಲಿ ತಡೆ ಕಂದಕಗಳನ್ನು ಕೂಲಿ ಆಳುಗಳ ಮೂಲಕವೆ ಮಾಡಬೇಕೆಂಬ ನಿಯಮವಿದ್ದರೂ, ಇಲ್ಲಿ ವನ್ಯಜೀವಿ ಇಲಾಖೆ ಕೂಲಿಯಾಳುಗಳ ಮೂಲಕ ಕಾಮಗಾರಿ ಮಾಡದೆ ಬಂಡವಾಳ ಶಾಹಿಗಳ ಜೆಸಿಬಿಗಳ ಮೂಲಕ ಮಾಡಿಸುತ್ತಿರುವುದು ಬೆಳಕಿಗೆ ಬರುತ್ತಿದೆ. ಶಬ್ದ ಮಾಲಿನ್ಯದಿಂದ ವನ್ಯಪ್ರಾಣಿಗಳ ಸ್ವಚ್ಚಂದ ಬದುಕಿಗೆ ತೊಂದರೆಯಾಗುವುದು ಈ ಇಲಾಖೆಗೆ ಮನವರಿಕೆಯಿದ್ದರೂ ಜೆಸಿಬಿಗಳ ಘರ್ಜನೆ ಇಲ್ಲಿ ಮಾಮುಲಿಯಾಗಿದೆ ಎಂಬಂತಾಗಿದೆ. ತಡೆ ಕಂದಕ ಕಾಮಗಾರಿಯು ಪ್ರಗತಿಯಲ್ಲಿದ್ದರೂ, ಇದಕ್ಕು ದಿನಾಂಕ: 01.12.2016 ರಂದು ಟೆಂಡರ್ ಕರೆಯಲಾಗಿದೆ.

ತಮಗೆ ಬೇಕಾದ ಗುತ್ತಿಗೆದಾರರನ್ನಷ್ಟೆ ಟೆಂಡರಿನಲ್ಲಿ ಭಾಗವಹಿಸುವಂತೆ ತಂತ್ರ ರೂಪಿಸುವ ವನ್ಯಜೀವಿ ಇಲಾಖೆಯ ಈ ರೀತಿಯ ವರ್ತನೆಯಿಂದ ಅನೇಕ ಯುವ ಗುತ್ತಿಗೆದಾರರು ವನ್ಯಜೀವಿ ಇಲಾಖೆಯ ಕಾಮಗಾರಿ ಪಡೆಯುವ ಬಯಕೆಯಿಂದ ವಂಚಿತರಾಗುತ್ತಿರುವುದು ಸಧ್ಯಕ್ಕೆ ಇಲ್ಲಿ ನಡೆಯುತ್ತಿರುವ ವಾಸ್ತವ ಸತ್ಯ.

ಒಟ್ಟಿನಲ್ಲಿ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ, ಟೆಂಡರ್ ಕರೆಯದೆ ಕಾಮಗಾರಿ ನಡೆಸಿರುವುದು ಮತ್ತು ಕಾಮಗಾರಿ ನಡೆಸಲು ಆದೇಶಿಸಿದ ಅಧಿಕಾರಿಗಳ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಬಲವಾಗಿ ಕೇಳಿ ಬರುತ್ತಿದೆ. ವನ್ಯಜೀವಿ ಸಂರಕ್ಷಣೆಗಾಗಿ ಕೋಟಿ ಕೋಟಿ ರೂ ಹರಿದು ಬರುತ್ತಿರುವ ಈ ಇಲಾಖೆಯ ಕಾರ್ಯವೈಖರಿ ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ತನಿಖೆಗೊಳಪಡಿಸಿ ವನ್ಯಜೀವಿ ಇಲಾಖೆಗೆ ಮೇಜರ್ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ. ಇದು ಆಗುವವರೆಗೂ ಅಧಿಕಾರಿಗಳ ಆಟಟೋಪ ನಿಲ್ಲಲ್ಲ ಎಂಬ ಗಟ್ಟಿ ಮಾತು ನಗರದಲ್ಲಿ ಚರ್ಚೆಯಲ್ಲಿದೆ.

ತನಿಖೆಗಾಗಿ ದೂರು :
ವನ್ಯಜೀವಿ ಇಲಾಖೆಯ ಕಾರ್ಯವೈಖರಿ ಮತ್ತು ನಿಯಮಬಾಹಿರ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ನಗರ ಸಭಾ ಸದಸ್ಯ ಹಾಗೂ ಡಿವೈಎಫ್‍ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಸ್ಯಾಮಸನ್ ಅವರು ಬೆಂಗಳೂರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.

ಹೌದು ಟೆಂಡರ್ ಕರೆದಿದ್ದೇವೆ- ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ- ಓ.ಪಾಲಯ್ಯ
ಹೌದು ಇದೀಗ ನಾವು ಟೆಂಡರ್ ಕರೆದಿದ್ದೇವೆ. ಕಾಮಗಾರಿ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಟೆಂಡರ್ ಕರೆಯುವ ಮುಂಚೆ ಕಾಮಗಾರಿ ಆಗಿದ್ದಲ್ಲಿ ಕಾಮಗಾರಿ ನಡೆಸಿದವ ಮತ್ತು ಅದಕ್ಕೆ ಸಹಕರಿಸಿದ ಅಧಿಕಾರಿಗಳು ಶಿಕ್ಷೆ ಅನುಭವಿಸುತ್ತಾರೆ. ಇಲಾಖೆಯ ನಿಯಮಾವಳಿಯಂತೆ ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಓ.ಪಾಲಯ್ಯ ಪತ್ರಿಕೆಗೆ ತಿಳಿಸಿದ್ದಾರೆ.

loading...