ವಿದ್ಯಾರ್ಥಿಗಳಿಗೆ ದೊರೆಯದ ಶೂ ಭಾಗ್ಯ

0
28

ಕನ್ನಡಮ್ಮ ಸುದ್ದಿ-ಶಿರಸಿ: ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಮೂರು ತಿಂಗಳು ಸಮೀಪಿಸುತ್ತಿದ್ದರೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಶೇಕಡಾ 20ರಷ್ಟು ಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಸರ್ಕಾರದಿಂದ ಸಿಗುವ ಉಚಿತ ಶೂ ಭಾಗ್ಯ ದೊರೆತಿಲ್ಲ. ಹೀಗಾಗಿ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬರಿಗಾಲ ಪ್ರಯಾಣ ಮಾಡುವಂತಾಗಿದೆ.
ಸರ್ಕಾರವು ಪ್ರತಿ ವರ್ಷವೂ ಶಾಲಾ ಮಕ್ಕಳಿಗೆ ಶೂ ಭಾಗ್ಯ ನೀಡುತ್ತಿದ್ದು ಆಯಾ ಶಾಲೆಗಳ ಅಭಿವೃದ್ಧಿ ಸಮಿತಿಗೆ ಅಗತ್ಯವಿರುವ ಮೊತ್ತವನ್ನು ಜಮಾ ಮಾಡಿ ಶೂ ಹಂಚಿಕೆ ಮಾಡುವಂತೆ ಸೂಚಿಸಿದೆ. ಆದರೆ ಈ ಬಾರಿ ಶೂ ಭಾಗ್ಯಕ್ಕೆ ಅನುದಾನ ಎಲ್ಲಾ ಶಾಲೆಗಳಿಗೆ ಹಂಚಿಕೆ ಆಗಿದ್ದು ಶೆ.80ರಷ್ಟು ಶಾಲೆಗಳಲ್ಲಿ ಮಾತ್ರ ಇದರ ಫಲ ವಿದ್ಯಾರ್ಥಿಗಳಿಗೆ ದೊರೆತಿದೆ. ಉಳಿದ ಕಡೆಗಳಲ್ಲಿ ಸಮಿತಿಯವರು ಇನ್ನೂ ಶೂ ಹಂಚಿಕೆ ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟೂ 1195 ಪ್ರಾಥಮಿಕ ಶಾಲೆ ಹಾಗೂ 74 ಸರ್ಕಾರಿ ಪ್ರೌಢಶಾಲೆಗಳಿದ್ದು, ಪ್ರತಿ ಶಾಲೆಗಳಲ್ಲಿಯೂ ಒಂದು ವಿದ್ಯಾರ್ಥಿಗೆ 250 ರೂ. ನಂತೆ ಶೂ ಭಾಗ್ಯದಡಿ ಅನುದಾನ ದೊರೆಯಲಿದೆ. ಆದರೆ ಇವುಗಳಲ್ಲಿ ಇನ್ನೂ ಶೆ.20 ರಷ್ಟು ಶಾಲೆಗಳಿಗೆ ಶೂ ವ್ಯವಸ್ಥೆ ಆಗಬೇಕಿದ್ದು, ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿದೆ. ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರೂರು ಕಿರಿಯ ಪ್ರಾಥಮಿಕ ಶಾಲೆಯ ಬಾಲಕರಿಗೆ ಇನ್ನೂ ಸಹ ಶೂ ಭಾಗ್ಯ ಲಭಿಸಿಲ್ಲ. ಶಾಲೆಯಲ್ಲಿ 6 ವಿದ್ಯಾರ್ಥಿಗಳಿದ್ದು, ಇವರು ಪ್ರತಿ ದಿವಸ 4 ಕಿ.ಮೀ. ದೂರದಿಂದ ಬರೀ ಕಾಲಿನಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಗದ್ದೆ ಹಾಳಿ, ಹೊಳೆ ಸೇರಿದಂತೆ ಗುಡ್ಡಗಳನ್ನು ದಾಟಿಕೊಂಡು ಇವರು ಶಾಲೆ ಸೇರುತ್ತಾರೆ. ಅಲ್ಲದೇ ಮಳೆಗಾಲ ಆದ ಕಾರಣ ಹಾವುಗಳ ಕಾಟವೂ ಇಲ್ಲಿ ಹೆಚ್ಚಾಗಿದೆ. ಆದರೆ ಕಾಲಿನಲ್ಲಿ ಶೂ ಇಲ್ಲದ ಕಾರಣ ಭಯದಿಂದಲೇ ಶಾಲೆಗೆ ತೆರಳುವ ಅನಿವಾರ್ಯತೆ ಎದುರಾಗಿದೆ.
`ಜಿಲ್ಲೆಯ ಬಹುತೇಕ ಶಾಲೆಗಳಿಗೆ ಶೂ ಹಂಚಿಕೆಯಾಗಿದ್ದು, ಒಂದು ವಾರದಲ್ಲಿ ಎಲ್ಲಾ ಶಾಲೆಗಳಿಗೆ ಶೂ ನೀಡಲಾಗುವುದು. 300-400 ವಿದ್ಯಾರ್ಥಿಗಳು ಇರುವ ಶಾಲೆಗಳಲ್ಲಿ ಶೂ ಹಂಚಿಕೆ ತಡವಾಗಿದ್ದು, ಈಗಾಗಲೇ ಎಸ್.ಡಿ.ಎಮ್.ಸಿ.ಯವರು ಶೂಗಾಗಿ ಆರ್ಡರ್ ನೀಡಿದ್ದಾರೆ. ಆದಷ್ಟು ಶೀಘ್ರದಲ್ಲಿ ಬರಲಿದ್ದು, ಬಂದ ತಕ್ಷಣವೇ ಹಂಚಿಕೆ ಮಾಡಲಾಗುತ್ತದೆ’ ಎನ್ನುತ್ತಾರೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಭಾರಿ ಡಿಡಿಪಿಐ ಸಿ.ಎಸ್.ನಾಯ್ಕ.

==========ಬಾಕ್ಸ್======

ಸೈಕಲ್, ಯುನಿಫಾರ್ಮ್ ಭಾಗ್ಯವಿಲ್ಲ….
ಶೂ ಭಾಗ್ಯದ ಜೊತೆಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಸೈಕಲ್ ಹಾಗೂ ಯುನಿಫಾರ್ಮ್ ಭಾಗ್ಯವೂ ಸಹ ವಿದ್ಯಾರ್ಥಿಗಳಿಗೆ ದೊರಕಿಲ್ಲ. ಅಲ್ಲದೇ ಶೈಕ್ಷಣಿಕ ಜಿಲ್ಲೆಯ ಎಲ್ಲಾ ತಾಲೂಕಿಗೆ ಎಲ್ಲಾ ಪುಸ್ತಕಗಳು ಇನ್ನೂ ಪೂರೈಕೆಯಾಗಿಲ್ಲ. ಇನ್ನು ಸೈಕಲ್ ಪ್ರತಿ ವರ್ಷವೂ ವಿಳಂಬವಾಗಿಯೇ ವಿದ್ಯಾರ್ಥಿಗಳಿಗೆ ದೊರಕುತ್ತಿದ್ದು, ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಶೀಘ್ರದಲ್ಲಿ ಒದಗಿಸಿ ಕೊಡಬೇಕು.

-ಮಂಜುನಾಥ ಗೌಡ- ಪಾಲಕ

loading...