ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಪಾತ್ರ ಮುಖ್ಯ: ಶ್ರೀಗಳು

0
67

ಕನ್ನಡಮ್ಮ ಸುದ್ದಿ-ನರೇಗಲ್ಲ: ಗುರು ಎಲ್ಲರಿಗಿಂತ ಸರ್ವ ಶ್ರೇಷ್ಠ ಜಗತ್ತಿನಲ್ಲಿ ಒಬ್ಬ ವ್ಯಕ್ತಿ ಜೀವಿಸಲು ತಂದೆ ತಾಯಿ ಎಷ್ಟು ಮುಖ್ಯವೋ, ಅವನಿಗೆ ಬದುಕನ್ನು ನೀಡುವಲ್ಲಿ ಗುರುವಿನ ಪಾತ್ರ ಮಹತ್ವದ್ದು. ಹೀಗಾಗಿ ಈ ಜಗತ್ತಿನಲ್ಲಿ ಗುರು ಎಲ್ಲರಿಗಿಂತ ಶ್ರೇಷ್ಠನಾಗಿದ್ದಾನೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಹಿರೇಮಠದ ಸಭಾಭವನದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳ ಹಾಗೂ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ-ಶಿಕ್ಷಕಿಯರ ಬಳಗದವರು ನೀಡಿದ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡುತ್ತಿದರು.
ಗುರು ಮತ್ತು ಶಿಷ್ಯರ ಬಾಂಧವ್ಯ ಇಂದು ನಿನ್ನೆಯದಲ್ಲ. ಇದು ಸನಾತನ ಕಾಲದಿಂದಲೂ ನಡೆದು ಬಂದ ದಾರಿಯಾಗಿದೆ. ಕಾಲಕ್ಕನುಗುಣವಾಗಿ ಆಚರಣೆಗಳು ಬದಲಾಗಿವೆಯೇ ವಿನಃ ಪರಂಪರೆಗಳು ಅಳಿದಿಲ್ಲ. ನೀವುಗಳು ಅಕ್ಷರ ಜ್ಞಾನ ಪಡೆಯುವದರಿಂದ ಲೌಕಿಕ ಜ್ಞಾನವನ್ನು ಪಡೆಯುತ್ತೀರಿ. ಅದಕ್ಕೆ ಶಾಲೆಗಳಲ್ಲಿ ಗುರುಗಳಿರುತ್ತಾರೆ. ಆದರೆ ಅಲೌಕಿಕ ಜ್ಞಾನ ಪಡೆಯಬೇಕೆಂದರೆ ಆಧ್ಯಾತ್ಮಿಕ ಗುರುಗಳ ಬಳಿ ಅದನ್ನು ಪಡೆಯಬಹುದು. ಎರಡೂ ಜ್ಞಾನಗಳು ಮನುಷ್ಯನ ಅಭಿವೃದ್ಧಿಗೆ ಸಹಕಾರಿ ಎಂದು ಶ್ರೀಗಳು ತಿಳಿಸಿದರು.
ಯಾರು ಧರ್ಮವನ್ನು ರಕ್ಷಿಸುತ್ತಾರೊ ಅವರನ್ನು ಧರ್ಮ ರಕ್ಷಿಸುತ್ತದೆ ಎಂಬುದನ್ನು ಅರಿತು ಗುರು ಪರಂಪರೆಯ ಸ್ಮರಣೆ ಮತ್ತು ಗುರುವನ್ನು ಗೌರವಿಸುವುದು ನಮ್ಮ ಭಾರತಿಯ ಪರಂಪರೆಯಾಗಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಭಕ್ತರ ಕರ್ತವ್ಯವಾಗಿದೆ ಎಂದು ಶ್ರೀಗಳು ತಿಳಿಸಿದರು.
ಗುರುಪೂರ್ಣಿಮೆ ಕಾರ್ಯಕ್ರಮದ ನಿಮಿತ್ತ ನಡೆದ ಈ ಸಮಾರಂಭದಲ್ಲಿ ಡಾ. ಕೆ.ಬಿ.ಧನ್ನೂರ, ಶಿಕ್ಷಕ ಅರುಣ ಬಿ. ಕುಲಕರ್ಣಿ ಗುರುವಿನ ಮಹತ್ವ ಕುರಿತು ಮಾತನಾಡಿದರು. ಶರಣಪ್ಪ ಜುಟ್ಲದ, ಅನ್ನಪೂಣೇಶ್ವರಿ ಬಳಗದ ಅಧ್ಯಕ್ಷೆ ಕಸ್ತೂರಿ ಧನ್ನೂರ, ರಮೇಶ ಕಳಕೊಣ್ಣವರ, ಚಂದ್ರು ರಾಠೋಡ, ನಿಂಗಪ್ಪ ಮಡಿವಾಳರ, ಮೈಲಾರಿ ಚಳ್ಳಮರದ ಉಪಸ್ಥಿತರಿದ್ದರು. ಶಿಕ್ಷಕಿ ರೇಣುಕಾ ರಾಮಣ್ಣವರ ನಿರೂಪಿಸಿದರು, ರತ್ನಾ ಕುರ್ತಕೋಟಿ ಸ್ವಾಗತಿಸಿದರು, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ ವಂದಿಸಿದರು.

loading...