ವಿಶಿಷ್ಟಚೇತನರ ವಿಶ್ವಾಸ ವೃದ್ಧಿಗೆ ಕಾರ್ಯಕ್ರಮ ಏರ್ಪಡಿಸಿ: ಬಸವರಾಜು

0
15

ಕನ್ನಡಮ್ಮ ಸುದ್ದಿ-ಗದಗ: ಇತ್ತೀಚಿನ ದಿನಗಳಲ್ಲಿ ದೈಹಿಕಕ್ಕಿಂತ ಮಾನಸಿಕ ಅಂಗವಿಕಲತೆೆ ಹೆಚ್ಚಿನ ಪ್ರಾಧಾನ್ಯತೆ ಪಡೆಯುತ್ತಿದ್ದು, ವಿಶಿಷ್ಟಚೇತನರಿಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ಹಾಗೂ ಪುನರ್ವಸತಿ ಕಾರ್ಯಕರ್ತರು ಅರ್ಹರಿಗೆ ಸೌಲಭ್ಯ ದೊರಕಿಸಲು ಈ ಕುರಿತು ಸಂಪೂರ್ಣ ಮಾಹಿತಿ ಹೊಂದಲು ಪುನರ್‌ ಮನನ ಕಾರ್ಯಕ್ರಮ ಜರುಗಿಸಲು ಹಾಗೂ ಈ ಮಾಹಿತಿಯನ್ನು ಗ್ರಾಮೀಣ ಮಟ್ಟದಲ್ಲೂ ಅಗತ್ಯವುಳ್ಳವರಿಗೆ ಗೊತ್ತಾಗುವಂತೆ ಹೆಚ್ಚಿನ ಪ್ರಯತ್ನಗಳು ನಡೆಯಬೇಕು ಎಂದು ರಾಜ್ಯ ಅಂಗವಿಕಲ ಅಧಿನಿಯಮದ ಆಯುಕ್ತ ಎಸ್‌.ವಿ. ಬಸವರಾಜು ಸೂಚಿಸಿದರು.
ಗದಗ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳ ವಿವಿಧ ಪುನರ್ವಸತಿ ಕಾರ್ಯಕರ್ತರ ಸಭೆಯಲ್ಲಿ ವಿಶಿಷ್ಟಚೇತನರಿಗೆ ಗದಗ ಜಿಲ್ಲೆಯಲ್ಲಿ ಒದಗಿಸುತ್ತಿರುವ ಯೋಜನೆ, ಸೌಲಭ್ಯಗಳ ಕುರಿತು ಪರಿಶೀಲಿಸಿ ಅವರು ಮಾತನಾಡಿದರು.
21 ರೀತಿಯ ಅಂಗವಿಕಲತೆಗಳನ್ನು ಗುರುತಿಸಲಾಗಿದ್ದು, ಮಾನಸಿಕ ವಿಷಯಕ್ಕೆ ಸಂಬಂಧಿಸಿದವು ಹೆಚ್ಚಾಗಿವೆ. ಇಂದು ತ್ರಿಚಕ್ರ ವಾಹನಕ್ಕೆ ಪ್ರಾಧಾನ್ಯತೆ ಸಲ್ಲಿಸಿ ಅಂಗವಿಕಲ ಮಕ್ಕಳ ಶಿಕ್ಷಣ ಸೌಲಭ್ಯಕ್ಕೆ, ಉದ್ಯೋಗ, ಕೌಶಲ್ಯ ವರ್ಧನೆ, ವೈದ್ಯಕೀಯ ಚಿಕಿತ್ಸೆ ಅವರ ಸಾಮರ್ಥ್ಯ ವೃದ್ಧಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರಗಳನ್ನು ಏರ್ಪಡಿಸಿ ಸ್ವಾವಲಂಬನೆ ಜೀವನ ನಡೆಸುವ ಕುರಿತು ವಿಶ್ವಾಸ ವೃದ್ಧಿಗೆ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮವನ್ನು ರೂಪಿಸಬೇಕು. ರಾಜ್ಯ ಅಂಗವಿಕಲ ಅಧಿನಿಯಮದ ಆಯುಕ್ತಾಲಯದಿಂದ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ವಿಕಲಚೇತನರ ಸೌಲಭ್ಯ ಒದಗಿಸುವ ಕುರಿತಂತೆ ಹೊಸದಾಗಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಒದಗಿಸಲಿದೆ ಎಂದರು.
ಗದಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಮಾತನಾಡಿ, ವಿಶಿಷ್ಟಚೇತನರಿಗೆ ತ್ರಿಚಕ್ರ ವಾಹನ ಸೌಲಭ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಅನುದಾನ ನೀಡುತ್ತಿದೆ. ಆದುದರಿಂದ ವಿವಿಧ ಸ್ಥಳೀಯ ಸಂಸ್ಥೆಗಳ ಜಿಲ್ಲಾ ಪಂಚಾಯತಿಯಿಂದ ಹಾಗೂ ಸಂಸದ ಮತ್ತು ಶಾಸಕರ ಅನುದಾನದಲ್ಲಿ ತ್ರಿಚಕ್ರ ವಾಹನದ ಪ್ರಸ್ತಾವನೆಗಳನ್ನು ಸಲ್ಲಿಸದಿರಲು ನಿರ್ದೇಶನ ನೀಡಿದರು. ಜಿಲ್ಲೆಯ ನಗರ ನಗರ ವ್ಯಾಪ್ತಿಯಲ್ಲಿ ವಿವಿಧ ರೀತಿ ವಿಕಲಚೇತನರ ನಿರ್ದಿಷ್ಟವಾಗಿ ಗುರುತಿಸುವಿಕೆಗೆ ಸಮೀಕ್ಷೆಗಳನ್ನು ನಡೆಸಲು ಉದ್ದೇಶಿಸಿದ್ದು ಈಗಾಗಲೇ ಗಜೇಂದ್ರಗಡ ಪುರಸಭೆ ವ್ಯಾಪ್ತಿಯಲ್ಲಿ ಮಾದರಿಯಾಗಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಅದರ ವರದಿ ಪೂರ್ಣವಾಗಿ ತಯಾರಾದ ನಂತರ ಅದೇ ರೀತಿ ಉಳಿದ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಕೋಶದ ರುದ್ರೇಶ ಮಾಹಿತಿ ನೀಡಿದರು.
ತಾಲೂಕು ಹಾಗೂ ಗ್ರಾ. ಪಂ. ಮಟ್ಟದಲ್ಲಿರುವ ವಿವಿದೋದ್ದೇಶ ಪುನರ್ವಸತಿ, ನಗರ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಜವಾಬ್ದಾರಿ ಈ ನಿಟ್ಟಿನಲ್ಲಿ ಹೆಚ್ಚಿದ್ದು ತಮ್ಮ ವ್ಯಾಪ್ತಿಯ ಅಂಗವಿಕಲ ಮಕ್ಕಳು ಶಿಕ್ಷಣ, ಉತ್ತಮ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ, ಅರ್ಹ ವಿಶಿಷ್ಟಚೇತನರಿಗೆ ಅಗತ್ಯದ ಸೌಲಭ್ಯ ಸಿಗುವಂತೆ ಸದಾ ಪ್ರಯತ್ನಶೀಲರಾಗಲು ಆಯುಕ್ತ ಎಸ್‌.ವಿ. ಬಸವರಾಜು ಮನವಿ ಮಾಡಿದರು.
ಸಭೆಯಲ್ಲಿ ವಿಕಲಚೇತನರಿಗೆ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿ.ಪಂ. ದ ಉದ್ಯೋಗ ಖಾತರಿ ಯೋಜನೆ, ಶಿಕ್ಷಣ , ಪೊಲೀಸ ಆರೋಗ್ಯ, ಜಿಲ್ಲಾಸ್ಪತ್ರೆಗಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಆಯುಕ್ತರು ವಿಸ್ತೃತ ಪರಿಶೀಲನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು.
ಎಸ್‌.ಕೆ. ಪದ್ಮಾನಾಭ, ಬಿ. ಹಂಪಣ್ಣ, ಶಿವಾನಂದ ಕರಾಳೆ, ಎಸ್‌.ಸಿ. ಮಹೆಶ, ಪಿ.ಎಸ್‌. ಮಂಜುನಾಥ, ಲಿಂಗಪ್ಪ, ಗುರು ಹಿರೇಮಠ, ರಾಮಕೃಷ್ಣ ಪಡಗಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ನಗರ ಪುರಸಭೆ ಪ.ಪಂ.ಗಳ ಮುಖ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಪುನರ್ವಸತಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ವಿಶಿಷ್ಟಚೇತನ ಹಾಗೂ ಹಿರಿಯ ನಾಗರಿಕರ ಇಲಾಖೆ ಅಧಿಕಾರಿ ಆಶು ನದಾಫ್‌ ಸ್ವಾಗತಿಸಿದರು.

loading...