ವಿಶ್ವಕಪ್‌: ಮಯಾಂಕ್ ಅಗರ್ವಾಲ್‌ಗೆ ಐಸಿಸಿ ಗ್ರೀನ್‌ ಸಿಗ್ನಲ್‌

0
21

ಲಂಡನ್‌:-ಪ್ರಸಕ್ತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾದ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರ ಬದಲಾಗಿ ಸ್ಫೋಟಕ ಬ್ಯಾಟ್ಸ್‌ಮನ್‌ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅವರನ್ನು ತಂಡಕ್ಕೇ ಸೇರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸಮ್ಮತಿಸಿದೆ.

ಕರ್ನಾಟಕ ರಣಜಿ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ ಆಗಿರುವ ಮಯಾಂಕ್‌ ಅಗರ್ವಾಲ್‌, ಕಳೆದ ಆಸ್ಟ್ರೇಲಿಯಾ ಪ್ರವಾಸಲ್ಲಿ ಭಾರತದ ಪರ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು. ಆದರೆ ಏಕದಿನ ಮಾದರಿಯಲ್ಲಿ ಇಲ್ಲಿಯವರೆಗೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮಹತ್ವದ ಟೂರ್ನಿ ವಿಶ್ವಕಪ್‌ನಲ್ಲೇ ಏಕದಿನ ಮಾದರಿಗೆ ಚೊಚ್ಚಲ ಪದಾರ್ಪಣೆ ಮಾಡುವ ಉತ್ಸಾಹದಲ್ಲಿದ್ದಾರೆ.

ಅಭ್ಯಾಸದ ವೇಳೆ ಎಡಗಾಲಿನ ಪಾದಕ್ಕೆ ಪೆಟ್ಟು ಮಾಡಿಕೊಂಡಿರುವ ವಿಜಯ್‌ ಶಂಕರ್‌ ಟೂರ್ನಿಯಿಂದಲೇ ನಿರ್ಗಮಿಸುವಂತಾಗಿದೆ. ಇದೀಗ ಅವರ ಸ್ಥಾನದಲ್ಲಿ ಭಾರತ ತಂಡದ 15 ಆಟಗಾರರ ಬಳಗವನ್ನು ಸೇರಿಕೊಳ್ಳಲು ಐಸಿಸಿಯ ತಾಂತ್ರಿಕ ಸಮಿತಿಯು ಸೋಮವಾರ ಗ್ರೀನ್‌ ಸಿಗ್ನಲ್‌ ನೀಡಿದೆ.

“ವಿಜಯ್‌ ಶಂಕರ್‌ ಅವರ ಎಡಗಾಲಿನ ಪಾದದಲ್ಲಿ ಮೂಳೆ ಕೊಂಚ ಬಿರುಕು ಕಂಡಿದೆ. ಇದರಿಂದ ಚೇತರಿಸಲು ಅವರಿಗೆ ಕನಿಷ್ಠ ಮೂರು ವಾರಗಳ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಅವರು ವಿಶ್ವಕಪ್‌ನಿಂದ ಹೊರಗುಳಿಯುವಂತಾಗಿದೆ. ಟೀಮ್‌ ಇಂಡಿಯಾ ಮ್ಯಾನೇಜ್ಮೆಂಟ್‌ ಮಯಾಂಕ್‌ ಅಗರ್ವಾಲ್‌ ಅವರನ್ನು ಬದಲಿ ಆಟಗಾರನಾಗಿ ನೀಡುವಂತೆ ಐಸಿಸಿಗೆ ಮನವಿ ಮಾಡಿದೆ,” ಎಂದು ಬಿಸಿಸಿಐನ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲೂ ವಿಜಯ್‌ ಶಂಕರ್‌ ಆಡಿರಲಿಲ್ಲ. ಅವರ ಸ್ಥಾನದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಸ್ಥಾನ ಪಡೆದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್ ಗಾಯಗೊಂಡು ನಿರ್ಗಮಿಸಿದ ಪರಿಣಾಮ ಪಂತ್‌ ಅವರನ್ನು ಬದಲಿ ಆಟಗಾರನಾಗಿ ಭಾರತ ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು.

loading...