ವಿಶ್ವಕರ್ಮ ದಿನಾಚಾರಣೆಯ ಲೇಖನ

0
262

ಮುಂಡರಗಿ : ವಿಶ್ವಕರ್ಮ ನಮಗೆ ಎರಡು ರೀತಿಯಲ್ಲಿ ವ್ಯಕ್ತನಾಗಿದ್ದಾನೆ. ಮೊದಲನೇದಾಗಿ ವಿಶ್ವಕರ್ಮ ಪರಬ್ರಹ್ಮ ಅಥವಾ ಋಗ್ವೇದದಲಿ ನಿರೂಪಿಸಲ್ಪಟ್ಟಿರುವ ವಿಶ್ವಕರ್ಮ ಪರಮಾತ್ಮ. ಈತನು ಸ್ವಯಂಭೂ. ಈ ವಿಶ್ವದಲ್ಲಿ ಯಾವದೂ ಇಲ್ಲದಿದ್ದ ಸಮಯದಲ್ಲಿ, ತಾನೇ ಉದ್ಭವಗೊಂಡು ತನ್ನನ್ನು ತಾನೇ ಹೋಮಿಸಿಕೊಂಡು ಈ ವಿಶ್ವದ ಸೃಷ್ಠಿಯನ್ನು ಮಾಡಿದನು. ನಾವು ಖಗೋಳ ಶಾಸ್ತ್ರದಲ್ಲಿ ಓದಿರುವಂತೆ ಸುಮಾರು ಲಕ್ಷ ವರ್ಷಗಳ ಹಿಂದೆ ಸಂಭವಿಸಿರುವ ಮಹಾಸ್ಪೋಟ(Big Bang) ಅದರಿಂದ ಉತ್ಪನ್ನವಾದ ನಭೋಮಂಡಲ, ತಾರೆಗಳು, ನಕ್ಷತ್ರಗಳು, ಜ್ಯೋತಿರ್ಮೇಘ ಉತ್ಪನ್ನವಾದವು. ಅದು ಅತ್ಯಂತ ಶಾಖಪೂರಿತ ಕೆಂಡದ ಅನಿಲದಿಂದೊಡಗೂಡಿದ ಉರಿಯುವ ಕೆಂಡದ ಮಳೆಯಂತಿತ್ತು. ಅದೇ ಹಿರಣ್ಯಗರ್ಭ. ಅದರಿಂದ ಅಗಣಿತ ಆಕಾಶಗಂಗೆಗಳು ಉಂಟಾಗಿ ಎಲ್ಲಾ ಕಡೆಗೂ ಹೊರ ಹೊರಟವು. ಅವು ನಕ್ಷತ್ರ ಕೋಟೆಗೆ ಆಶ್ರಯ ಸ್ಥಾನಗಳದವು. ಪೃಥ್ವಿ, ಅಗ್ನಿ, ನೀರು, ವಾಯು, ಆ ಆಕಾಶದಲ್ಲಿ ಕ್ರಮಬದ್ಧವಾಗಿ ಉಂಟಾದವು. ಜೀವವು ಉತ್ಪನ್ನವಾಯಿತು. ವಿಶ್ವವಸ್ತುಗಳ ಉತ್ಪತ್ತಿ ಎಂದರೇನೇ ಯಜ್ಞಕಾರ್ಯ. ಆದ್ದರಿಂದ ವಿಶ್ವಕರ್ಮನೆ ಹೋತ್ರ, ದಾತಾ,ವಿಧಾತಾ. ಮತ್ತು ಯಜ್ಞಪುರುಷ.
ಆಧುನಿಕ ವಿಜ್ಞಾನದ ಪ್ರಕಾರ ವಿಶ್ವಕರ್ಮನೇ ವಿಶ್ವದ ಮೂಲವು. ಅವನು ಶಕ್ತಿ ಸ್ವರೂಪನು. ತಟಸ್ಥನಲ್ಲ. ನಿರಂತರ ಕರ್ಮಶೀಲನು. ಇಂಥ ಮೂಲವಸ್ತುವಿಗೆ ವಿಶ್ವಕರ್ಮನೆಂದು ಹೆಸರಿಟ್ಟ ವೈಧಿಕ ಋಷಿಗಳ ವೈಜ್ಞಾನಿಕ ತಿಳುವಳಿಕೆಯನ್ನು ಕುರಿತು ಇಂದು ವಿಜ್ಞಾನಿಗಳೂ ಸಹಿತ ಮೆಚ್ಚುಗೆ ಸೂಸುವಂತಾಗಿದೆ.
ಮಹರ್ಷಿ ದಯಾನಂದ ಸರಸ್ವತಿಯವರು ತಮ್ಮ ಋಗ್Àವೇದ ಭಾಷ್ಯ ಭೂಮಿಕೆಯಲ್ಲಿ ವಿಶ್ವಕ್ಕೆ ಆಧಾರವಾಗಿರುವ ವೇದಕತ್ರ್ರವೂ ಆಗಿರುವ ಪರಮೇಶ್ವರನಾದ ವಿಶ್ವಕರ್ಮನೇ ಹೊರ್ತು ಬೇರೆ ಯಾವದೇ ದೇವರಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಅವನು ಶಕ್ತಿ ಸ್ವರೂಪನೂ, ವಾಚಸ್ಪತಿಯೂ ಆಗಿದ್ದಾನೆ. ವಾಕ್ ಶಕ್ತಿಯ ಆಧಾರದಿಂದಲೇ ಸಕಲವನ್ನು ನಿರ್ಮಿಸಿರುವದರಿಂದ ವಿಶ್ವಕರ್ಮನೆನಿಸಿದ್ದಾನೆ. ಅಗ್ನಿಯೂ ಅವನಿಂದಲೇ ಉತ್ಪನ್ನನಾಗಿದ್ದಾನೆ. ವಿಶ್ವಕರ್ಮನ ಈ ಜಗತ್ ಸೃಷ್ಠಿಗೆ ಯಜ್ಞವೇ ಆಧಾರ. ಅವನು ಯಜ್ಞಾಗ್ನಿ ರೂಪದಲ್ಲಿದ್ದಾನೆ. ಇದೇ ವೇದಗಳ ಮಥಿತಾರ್ಥ.
ಇನ್ನು ದೇವ ಶಿಲ್ಪಿ ವಿಶ್ವಕರ್ಮನ ವಿಚಾರ. ದೇವ ಶಿಲ್ಪಿ ವಿಶ್ವಕರ್ಮನ ತಂದೆ ಅಷ್ಟವಸುಗಳಲ್ಲಿ ಕೊನೆಯವನಾದ ಪ್ರಭಾಸ ಋಷಿ. ತಾಯಿ ದೇವಪುರೊಹಿತನಾದ ಬ್ರಹಸ್ಪತಾಚಾರ್ಯ ತಂಗಿ ಯೋಗಸಿದ್ಧಿ. ಈ ವಿಶ್ವಕರ್ಮನು, ಸೂರ್ಯ ಸಿಂಹ ರಾಸಿಯಿಂದ ಕನ್ಯಾರಾಶಿಗೆ ಪ್ರವೇಶ ಮಾಡುವ ಸಂಕ್ರಮಣ ಕಾಲದಲ್ಲಿ ಜನಿಸಿದ್ದರಿಂದ ಸಪ್ಟಂಬರ 17 ರ ಕನ್ಯಾ ಸಂಕ್ರಮಣದ ಮುಹೂರ್ತದಲ್ಲಿ ದೇವಶಿಲ್ಪಿ ವಿಶ್ವಕರ್ಮನ ಜಯಂತಿ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಮುಖ್ಯವಾಗಿ ಪದ್ಮಪುರಾಣ, ಸ್ಕಂದಪುರಾಣ, ವಿಷ್ಣು ಪುರಾಣ ಮುಂತಾದ ಪುರಾಣಗಳಲ್ಲಿ ಈತನ ಮಹಿಮೆ ಹಾಗೂ ಚರಿತ್ರೆ ನಿರೂಪಿಸಲ್ಪಟ್ಟಿದೆ.
ಈತ ಡಿವೈನ ಆರ್ಕಿಟೆಕ್ಚರ, ಹಾಗೂ ನಾಗರೀಕತೆ ವಿಕಾಸದ ವಿವಿಧ ಸ್ತರಗಳ ರುವಾರಿ ಎಂದು ವರ್ಣಿಸಲ್ಪಟ್ಟಿದ್ದಾನೆ. ಕುಬೇರನಿಗೆ ಸುವರ್ಣ ಲಂಕಾ ನಗರವನ್ನೂ, ಶ್ರೀಕೃಷ್ಣನ ಪ್ರಾರ್ಥನೆಯ ಮೇರೆಗೆ ದ್ವಾರಕಾ ನಗರವನ್ನೂ, ಪಾಂಡವರಿಗೆ ಹಸ್ತಿನಾಪುರ ಹಾಗೂ ಇಂದ್ರಪ್ರಸ್ಥ ನಗರಗಳನ್ನೂ ನಿರ್ಮಿಸಿಕೊಟ್ಟನೆಂದು ಪುರಾಣಗಳು ವರ್ಣಿಸುತ್ತವೆ.
ಹೀಗೆ ವಿವಿಧ ರೂಪದಲ್ಲಿ ವರ್ಣಿತನಾದ ವಿಶ್ವಕರ್ಮನು ಭಾರತೀಯ ಸಂಸ್ಕ್ರತಿಯ ಪ್ರತೀಕನಾಗಿದ್ದಾನೆ. ರೈತರಿಗೆ ಬೇಕಾದ ಕೃಷಿಉಪಕರಣಗಳನ್ನು ತಯಾರಿಸಿಕೊಟ್ಟು ಬೇಸಾಯ ಪದ್ದತಿಗೆ ಅಡಿಪಾಯ ಹಾಕಿದವರು ವಿಶ್ವಕರ್ಮರು. ಸಹಕಾರಿ ಚಳುವಳಿ ಹಾಗೂ ಬ್ಯಾಂಕಿಂಗ ವ್ಯವಸ್ಥೆ ಪ್ರಾರಂಭಿಸಿ ಹಣಕಾಸು ಚಟುವಟಿಕೆಗಳಿಗೆ ಇಂಬು ಮಾಡಿಕೊಟ್ಟವರು ವಿಶ್ವಕರ್ಮರು. ವಿದೇಶಿಗರನ್ನು ಆಕರ್ಷಿಸುತ್ತಿರುವ ಪ್ರಾಚೀನ ದೇವಾಲಯಗಳನ್ನು ಸೃಷ್ಠಿಸಿದವರು ವಿಶ್ವಕರ್ಮರು. ವಿಶ್ವಕರ್ಮ ಶಿಲ್ಪಿಗಳ ಹೆಸರಿಲ್ಲದೇ ಇರುವ ಕನ್ನಡ ಪ್ರಾಚೀನ ಶಾಸನಗಳೇ ಇಲ್ಲ. ಶಾಸನಗಳ ರುವಾರಿಗಳಾಗಿ, ಕಂಡರಣೆಕಾರರಾಗಿ, ದೇವಾಲಯಗಳ ಸ್ಥಾನಪತಿಗಳಾಗಿ ಬರಹಗಾರರಾಗಿ, ಆಸ್ಥಾನ ಶಿಲ್ಪಿಗಳಾಗಿ, ಗೌಡ ಶ್ಯನಭೋವರಾಗಿ ಆಡಳಿತಗಾರರಾಗಿ ಶಾಸನಗಳಲ್ಲಿ ವರ್ಣಿತರಾಗಿದ್ದಾರೆ. ಹೀಗೆ ಸಂಸ್ಕ್ರತಿಯ ವಿಕಾಸದ ವಿವಿಧ ಹಂತಗಳಲ್ಲಿ ತಮ್ಮದೇ ಕೊಡುಗೆ ಕೊಟ್ಟಿರುವ ವಿಶ್ವಕರ್ಮರು ಸಂಸ್ಕ್ರತಿ ಅಧ್ಯಯನಕಾರರ ನಿರ್ಲಕ್ಷ್ಯಕ್ಕೆ ಒಳಗಾಗಿರುವದು ದುರ್ದೈವದ ಸಂಗತಿ. ಕರ್ನಾಟಕ ಸಂಸ್ಕ್ರತಿಯ ಕುರುಹುಗಳೆಂದರೆ ವಿಶ್ವಕರ್ಮರು ಸೃಷ್ಠಿಸಿರುವ ಶಿಲ್ಪಗಳು ಹಾಗೂ ದೇವಾಲಯಗಳು. ಆವುಗಳ ಶಿಲ್ಪಸೌಂಧರ್ಯ ಹಾಗೂ ಸೊಬಗನ್ನು ವರ್ಣಿಸುವ ಇತಿಹಾಸಕಾರರಿಗೆ ಶಿಲ್ಪಿಗಳ ಬಗ್ಗೆ ಬರೆಯುವದು ಬೇಕಿಲ್ಲ.
ತಡವಾಗಿಯಾದರೂ, ವಿಶ್ಕಕರ್ಮ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸುವ ತೀರ್ಮಾನ ತಗೆದುಕೊಂಡಿರುವ ಕರ್ನಾಟಕ ಸರಕಾರವು ವಿಶ್ವಕರ್ಮ ಸಂಸ್ಕ್ರತಿ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕ್ರಮಕೈಗೊಂಡಿರುವದು ಅತ್ಯಂತ ಸ್ತುತ್ಯಕಾರ್ಯ. ಇದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಶುಭಾಶಯಗಳು.

loading...

LEAVE A REPLY

Please enter your comment!
Please enter your name here