ಶರಣರ ವಚನಗಳು ಸರ್ವ ಕಾಲಕ್ಕೂ ಶ್ರೇಷ್ಠ: ಸಣ್ಣಕ್ಕಿ

0
27

ಕನ್ನಡಮ್ಮ ಸುದ್ದಿ-ಗದಗ: ವಚನ ಶ್ರಾವಣ ಎಂದರೆ ವಚನಗಳನ್ನು ಮನನ ಮಾಡಿಕೊಳ್ಳುವದು, ಶರಣರ ವಚನಗಳು ಸರ್ವ ಕಾಲಕ್ಕೂ ಶ್ರೇಷ್ಠವಾಗಿವೆ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಸಣ್ಣಕ್ಕಿ ಹೇಳಿದರು.
ಅವರು ಶುಕ್ರವಾರ ಗದಗ ತಾಲೂಕ ಕಳಸಾಪೂರದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗದಗ ತಾಲೂಕ ಕದಳಿ ಮಹಿಳಾ ವೇದಿಕೆ ಎರ್ಪಡಿಸಿದ್ದ ವಚನ ಗಾಯನ ಸ್ಪರ್ಧೆ ಹಾಗೂ ಅಮೃತ ಭೋಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶರಣರ ಜೀವನ ನಮಗೆಲ್ಲ ಆದರ್ಶವಾಗಿದ್ದು ಮಕ್ಕಳು ಬಾಲ್ಯದಿಂದಲೇ ವಚನ ಶ್ರವಣ ಮಾಡುವದರಿಂದ ಪ್ರತಿಭೆಗೆ ಸ್ಪೂರ್ತಿ ಬರುತ್ತದೆ ಎಂದರು.
ಮಕ್ಕಳಿಗಾಗಿ ಎರ್ಪಡಿಸಿದ್ದ ವಚನ ವಾಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಬೆಳಧಡಿಯ ವೇ.ಮೂ.ಶಂಭುಲಿಂಗಯ್ಯ ಕಲ್ಮಠ ಮಾತನಾಡಿ ವಿದ್ಯಾರ್ಥಿಗಳು ಪ್ರತಿನಿತ್ಯ ಒಂದು ವಚನವನ್ನಾದರೂ ಪಠಣ ಮಾಡಬೇಕು ಇದರಿಂದ ನೀತಿ, ನಿಯಮಗಳು ಮೂಡಿ ಬರುತ್ತವೆ ಎಂದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವೇದಿಕೆಯಿಂದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಚನ ಶ್ರಾವಣ ಕಾರ್ಯಕ್ರಮ ಹಾಗೂ ಅಮೃತ ಭೋಜನ ನಡೆಸಲಾಗುತ್ತಿದ್ದು ಶರಣರ ಜೀವನ ಸಂದೇಶವನ್ನು ತಲುಪಿಸುವದು ವೇದಿಕೆಯ ಉದ್ದೇಶವಾಗಿದೆ ಎಂದರು. ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯರುಗಳಾದ ಪಿ.ವೀರಪ್ಪ, ಎಂ.ಪಿ.ಕಟ್ಟಿಮನಿ, ಡಿ.ಎಂ.ಮುದ್ದೇಬಿಹಾಳ, ಎಸ್‌.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ಲಮಾಣಿ ವಚನ ಶ್ರಾವಣ ಕುರಿತು ವಿವರಿಸಿದರು.
ವಚನ ಗಾಯನ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಸವಿತಾ ಹಾದಿಮನಿ ಹಾಗೂ ಸುನೀತಾ ರಾಯಣ್ಣವರ, ಕಿರಿಯ ಪ್ರಾಥಮಿಕ ಶಾಲೆಯ ಕವಿತಾ ಲಮಾಣಿ, ಕಾವ್ಯಾ ಲಮಾಣಿ, ಉರ್ದು ಶಾಲೆಯ ಪರ್ವಿನ್‌ಭಾನು ನದಾಫ, ಜೈನುಭೀ ದೊಡ್ಡಮನಿ ವಿಜೇತರಾಗಿ ಬಹುಮಾನ ಪಡೆದರು. ಪ್ರಾರಂಭದಲ್ಲಿ ಶಿಕ್ಷಕಿ ಎ.ಎಸ್‌.ಸೋಳಂಕಿ ವಚನ ಪ್ರಾರ್ಥನೆಗೈದರು, ಸುಮಾ ಪಾಟೀಲ ಸ್ವಾಗತಿಸಿದರು ಮಂಜು ಕೇಳಗೇರಿ ನಿರೂಪಿಸಿದರು ಕೊನೆಗೆ ಶಿಕ್ಷಕಿ ಚಿಟಪತ್ತಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸುವರ್ಣಾ ವಸ್ತ್ರದ, ಸುಲೋಚನಾ ಐಹೊಳ್ಳಿ, ಅನ್ನಪೂರ್ಣ ವರವಿ, ಡಾ.ತನುಜಾ ಗೋವಿಂದಪ್ಪನವರ, ಆರ್‌.ಎ.ಲೋಹರ, ಎಸ್‌.ಜಿ.ಓದನವರ ಹಾಗೂ ಎಸ್‌.ಡಿ.ಎಂ.ಸಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು.

loading...