ಶಿಥಿಲಾವ್ಯವಸ್ಥೆಯ ಶಾಲೆಗಳ ಬೋಧನಾ ವರ್ಗ ನಡೆಸದಂತೆ ಸೂಚನೆ

0
53

ವಿಜಯಪುರ: ಶಿಥಿಲಾವ್ಯವಸ್ಥೆಯಲ್ಲಿರುವ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಬೋಧನಾ ವರ್ಗಗಳನ್ನು ನಡೆಸದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ ಅವರು, ಮಳೆಗಾಲ ಪ್ರಾರಂಭವಾಗುವ ಹಿನ್ನಲೆಯಲ್ಲಿ ಪ್ರತಿ ಬ್ಲಾಕ್ ಮಟ್ಟದ ಶಿಥಿಲಾವ್ಯವಸ್ಥೆಯ ಶಾಲಾ ಕಟ್ಟಡ ಕೋಣೆಗಳನ್ನು ಗುರುತಿಸಬೇಕು. ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷದ ಶಿಥಿಲಾವ್ಯವಸ್ಥೆಯ ಎಲ್ಲ ಶಾಲಾ ಕಟ್ಟಡಗಳ ಪಟ್ಟಿ ಮಾಡಿ ಶಾಲಾ ಕೋಣೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ತಪ್ಪಿದ್ದಲ್ಲಿ ಆಯಾ ಶಾಲೆಯ ಮುಖ್ಯೋಪಾಧ್ಯಾಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಶಿಥಿಲಾವ್ಯವಸ್ಥೆಯಲ್ಲಿರುವ ಶಾಲಾ ಕೋಣೆಗಳ ದುರಸ್ತಿಗೆ ಕಳೆದ ವರ್ಷದ ಕ್ರೀಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2 ಶಾಲೆಗಳ ಕಟ್ಟಡ ದುರಸ್ತಿಗಾಗಿ 14ನೇ ಹಣಕಾಸು ಆಯೋಗದ ಅನುದಾನದಡಿ 5 ಕೋಟಿ ರೂ. ಮೀಸಲಿಡಲಾಗಿದೆ ಈ ಅನುದಾನದಡಿ ಆಯಾ ಶಾಲಾ ಕೊಠಡಿ ದುರಸ್ತಿ ಜೊತೆಗೆ ಕುಡಿಯುವ ನೀರು, ಶೌಚಾಲಯ, ಶೌಚಾಲಯಗಳಿಗೆ ನೀರು ಸೇರಿದಂತೆ ಇತರ ಸೌಲಭ್ಯ ಸಹ ಕಲ್ಪಿಸಬಹುದಾಗಿದ್ದು, ಈ ಅನುದಾನ ಬಳಕೆ ಕುರಿತಂತೆ ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಿದರು.
ಅದರಂತೆ ಜಿಲ್ಲೆಯಲ್ಲಿಯ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಸಹ 6-7 ಕೋಟಿ ರೂ. ಒದಗಿಸಿದ್ದು ಈ ಅನುದಾನ ಬಳಕೆ ಹಾಗೂ ಕೈಗೊಂಡ ಕ್ರಮಗಳ ಬಗ್ಗೆಯೂ ಸಹ ಸಕಾಲಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ವಿವಿಧ ಶಾಲಾ ಗೋಢೆಗಳ ನಿರ್ಮಾಣ, ಕ್ರೀಡಾಂಗಣದ ಅಭಿವೃದ್ದಿಗೂ ಸಹ 10 ಕೋಟಿ ರೂ. ಒದಗಿಸಲಾಗಿದೆ. ಅದರಂತೆ ಇತರೆ ಚಟುವಟಿಕೆಗಳಿಗಾಗಿ 10 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲು ಪಿಆರ್‍ಇಡಿ ಮೂಲಕ ಕ್ರಮ ಕೈಗೊಳ್ಳಲು ಸಹ ಸೂಚಿಸಲಾಗಿತ್ತು. ಈ ಕುರಿತಂತೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಮುಂಬರುವ ಜೂನ್.5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದ್ದು, ಅಂದು ಪ್ರತಿ ಹತ್ತು ಶಾಲೆಗಳನ್ನು ಆಯ್ಕೆ ಮಾಡಿ ಸಸಿ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ ಹಾಗೂ ಪ್ಲಾಸ್ಟಿಕ್ ಮುಕ್ತ ಶಾಲಾ ಪರಿಸರ ರೂಪಿಸಬೇಕು. ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಹಾಗೂ ಶಿಕ್ಷಕರು ಈ ಕುರಿತಂತೆ ಗಮನ ಹರಿಸುಂತೆ ಸೂಚಿಸಿ, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಓಗಳೊಂದಿಗೆ ಸಮನ್ವಯತೆ ಸಾಧಿಸಿ ಈಗಾಗಲೇ ಮಂಜೂರಾಗಿರುವ ಅನುದಾನ ಬಳಕೆಗೆ ಕ್ರಮ ಕೈಗೊಳ್ಳಬೇಕು. ನಂತರ ಪ್ರತ್ಯೇಕವಾಗಿ ಜಿಲ್ಲಾ ಮಟ್ಟದ ಸಭೆಯಲ್ಲಿ ಈ ಕುರಿತು ಪರಿಶೀಲಿಸುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಸನ್ನ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರಾಯಪ್ಪರೆಡ್ಡಿ, ಶಿಕ್ಷಣಾಧಿಕಾರಿ ಎ.ಎಂ.ಲಿಮಕರ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿವಿಧ ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.

loading...