ಶೀಘ್ರದಲ್ಲೇ ಮತ್ತೆ ಕೊಡಗಿಗೆ ಸಿಎಂ ಭೇಟಿ

0
21

ಬೆಂಗಳೂರು:ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡು ಹಿಂತಿರುಗಿದ್ದೇನೆ. ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿರುವ ಜನರ ರಕ್ಷಣೆ, ಅವರಿಗೆ ಆಶ್ರಯ ಒದಗಿಸಲು ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾಪಡೆಗಳು, ಎನ್‍ಡಿಆರ್‍ಎಫ್,ರಾಜ್ಯ ಪೊಲೀಸ್ ಇಲಾಖೆ, ಕೆಎಸ್‍ಆರ್‍ಪಿ,ಅಗ್ನಿಶಾಮಕ ದಳ, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಾವಿರಾರು ಜನರನ್ನು ರಕ್ಷಿಸಿದ್ದಾರೆ.ಜೊತೆಗೆ ಸ್ವಯಂ ಸೇವಕರ ತಂಡಗಳು,ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯೂ ಕೈಜೋಡಿಸಿ, ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾನು ಮತ್ತು ಮುಖ್ಯ ಕಾರ್ಯದರ್ಶಿಗಳು ಪ್ರತಿ ಗಂಟೆಗೊಮ್ಮೆ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದೇವೆ.ಪರಿಸ್ಥಿತಿ ಹತೋಟಿಗೆ ತರಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ.ಶೀಘ್ರದಲ್ಲೇ ಮತ್ತೊಮ್ಮೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸುವೆ.
ರಾಷ್ಟ್ರಪತಿ,ಪ್ರಧಾನಮಂತ್ರಿ ಕೊಡಗಿನ ಕುರಿತು ಕಾಳಜಿ ತೋರಿ ನೈತಿಕ ಸ್ಥೈರ್ಯ ತುಂಬಿದ್ದಾರೆ.ನೆರವಿನ ಭರವಸೆ ನೀಡಿದ್ದಾರೆ. ರಕ್ಷಣಾ ಸಚಿವರು ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟದ ಸಹೋದ್ಯೋಗಿಗಳಾದ ಆರ್.ವಿ.ದೇಶಪಾಂಡೆ,ಸಾ.ರಾ.ಮಹೇಶ್,ಹೆಚ್.ಡಿ.ರೇವಣ್ಣ,ಕೆ.ಜೆ.ಜಾರ್ಜ್, ಯು.ಟಿ. ಖಾದರ್,ಡಾ.ಜಯಮಾಲಾ,ಡಿ.ಸಿ.ತಮ್ಮಣ್ಣ ಮೊದಲಾದವರು ಕೊಡಗು ಹಾಗೂ ತಮ್ಮ ತಮ್ಮ ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ರಕ್ಷಣೆ, ಪರಿಹಾರ ಕಾರ್ಯಗಳಿಗೆ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ, ಬೆಂಬಲ ನೀಡಿದ್ದಾರೆ.ಎಲ್ಲರ ಸಹಕಾರ ದಿಂದ ಪರಿಹಾರ, ಪುನರ್ವಸತಿ ಕಾರ್ಯಗಳೂ ಯಶಸ್ವಿಯಾಗಿ ನಡೆಯುವ ವಿಶ್ವಾಸ ನನಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

loading...